
ಕನ್ನಡದ ಕಲೆಯ ಬೀಡಾದ ಬಳ್ಳಾರಿ ಹಿಂದಿನಿಂದಲೂ ಸಂಗೀತ, ನಾಟಕ, ಜಾನಪದ ಕಲೆ ಮತ್ತು ಸಂಸ್ಕೃತಿಗಳ ತವರೂ ರಾಗಿದೆ.ಇಂತಹ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಗಮನ ಸೆಳೆಯುವ ಹೆಸರು ಜಾನಪದಶ್ರೀ ಬೆಳಗಲ್ ವೀರಣ್ಣರದ್ದು. ರಂಗಭೂಮಿ ಮತ್ತು ಜಾನಪದ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ವೀರಣ್ಣರು ನಶಿಸಿ ಹೋಗುತ್ತಿರುವ ಜನಪದ ಕಲೆಗಳಲ್ಲಿ ಒಂದಾಗಿರುವ ತೊಗಲುಗೊಂಬೆಯಾಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುವ ಮೂಲಕ ಕನ್ನಡ ನಾಡಿಗೆ, ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅನಕ್ಷರಸ್ಥ ಸಿಳ್ಳೇಕ್ಯಾತ ಜನಾಂಗದಲ್ಲಿ ಹುಟ್ಟಿದ ವೀರಣ್ಣರ ಪೂರ್ವ ಜರು ಮಹಾನ್ ಕಲಾವಿದರೇ ಆಗಿದ್ದರು. ಅವರ ತಂದೆ ದಿ. ಹನುಮಂತಪ್ಪನವರು ಪ್ರಸಿದ್ಧ ಪಿಟೀಲು ವಾದಕರಾಗಿದ್ದರು ಅಲ್ಲದೆ ಬಯಲಾಟದ ಸ್ತ್ರೀ ಪಾತ್ರ ವೇಷಧಾರಿ ಯಾಗಿಯೂ ಹೆಸರು ಮಾಡಿದ್ದರು. ಬಾಲ್ಯದಲ್ಲಿ ವೀರಣ್ಣ ತಂದೆಯ ಬಯಲಾಟದ ವಿದ್ಯೆಯನ್ನು ರೂಢಿಸಿಕೊಂಡು ಹಳ್ಳಿಯ ಸುತ್ತಮುತ್ತಲಿನ ಭಜನೆ ಹಾಡುಗಾರಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಇವರ ಧ್ವನಿ ಹಾಗೂ ಗಾಯನ ಸಿರಿಯನ್ನು ಮೆಚ್ಚಿಕೊಂಡಿದ್ದ ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರು, ರಂಗ ಕರ್ಮಿ ಸಿಡಗಿನಮೊಳ ಚಂದ್ರಯ್ಯ ಸ್ವಾಮಿ ತಮ್ಮ ಕಂಪೆನಿಯ ನಾಟಕಗಳಿಗೆ ವೀರಣ್ಣರನ್ನು ಸೇರಿಸಿ ಪ್ರೋತ್ಸಾಹಿಸಿದರು.
ತಮ್ಮ ಹದಿಮೂರನೆ ವಯಸಿನಲ್ಲಿಯೇ ಹೆತ್ತವರನ್ನು ಕಳೆದುಕೊಂಡ ವೀರಣ್ಣ ಶಾಲೆಗೆ ಹೋಗಿ ಅಕ್ಷರ ಕಲಿತವರಲ್ಲ. ಅವರು ಕಲಿತದ್ದೆಲ್ಲಾ ರಂಗಭೂಮಿ ಮತ್ತು ಬದುಕಿನ ಅನುಭವದ ಪಾಠದಿಂದ.ಅವರ ಗುರುಗಳಾದ ವೈ.ಎಂ. ಚಂದ್ರಯ್ಯಸ್ವಾಮಿನವರು ಕಲಿಸಿದ ವಿದ್ಯೆಯೇ ವೀರಣ್ಣನವರ ಶಿಕ್ಷಣ.ಈ ಜ್ಞಾನವೇ ಅವರನ್ನು ಪುರಾಣ ಮತ್ತು ಆಧುನಿಕ ಸಾಹಿತ್ಯವನ್ನು ಅರಿಯುವ ಶಕ್ತಿಯನ್ನು ನೀಡಿದೆ ಎಂದರೆ ಅತಿಶಯೋಕ್ತಿ ಅಲ್ಲ.
ರಂಗಭೂಮಿ ಸೇವೆ: ರಂಗಭೂಮಿಯ ನಂಟು ವೀರಣ್ಣರನ್ನು ಪ್ರಸಿದ್ಧ ನಾಟಕ ಕಂಪೆನಿಗಳಲ್ಲಿ ನಟರಾಗಿ, ಗಾಯಕರಾಗಿ ದುಡಿಯುವಂತೆ ಮಾಡಿತು. ಹೊನ್ನಪ್ಪ ಭಾಗವತರ ಶ್ರೀ ಉಮಾ ಮಹೇಶ್ವರ ನಾಟ್ಯ ಸಂಘ, ಬಳ್ಳಾರಿಯ ಲಲಿತಮ್ಮನವರ ಶ್ರೀ ಲಲಿತಕಲಾ ನಾಟ್ಯ ಸಂಘ, ಚಂದ್ರಯ್ಯ ಸ್ವಾಮಿ ಯವರ ಶ್ರೀ ನಟರಾಜ ನಾಟಕ ಮಂಡಳಿ ಸೇರಿದಂತೆ ಹಲವು ಕಂಪೆನಿಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸುವ ಮೂಲಕ ನಟನೆಯಲ್ಲಿ ಪಳಗಿದರು. ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಬಾಲ ನಟರಾಗಿ, ಸ್ತ್ರೀ ಪಾತ್ರಧಾರಿಯಾಗಿ, ಖಳನಾಯಕರಾಗಿ, ಹಾಸ್ಯನಟರಾಗಿ ಗಮನ ಸೆಳೆದರು.
ಹೆಸರು ತಂದು ಕೊಟ್ಟ ಶಕುನಿ ಪಾತ್ರ
ಕಂದಗಲ್ಲು ಹನುಮಂತರಾಯರ ‘ರಕ್ತ ರಾತ್ರಿ’ ನಾಟಕದ ಶಕುನಿ ಪಾತ್ರ ವೀರಣ್ಣರಿಗೆ ಅಪಾರ ಯಶಸ್ಸನ್ನೂ, ಜನಪ್ರಿಯತೆಯನ್ನೂ ತಂದುಕೊಟ್ಟ ಪಾತ್ರ.‘ಅಣ್ಣ ತಂಗಿ’ಯಲ್ಲಿ ಕಾಸಿಂನ ಪಾತ್ರ, ‘ಟಿಪ್ಪು ಸುಲ್ತಾನ್’ ನಾಟಕದಲ್ಲಿ ಮೀರ್ ಸಾದಿಕ್‌ನ ಪಾತ್ರ ಭಾರಿ ಜನಪ್ರಿಯತೆಯನ್ನು ತಂದುಕೊಟ್ಟವು. ಹಲವು ನಾಟಕ ಕಂಪೆನಿಗಳಲ್ಲಿ ದುಡಿದ ಅನುಭವಿದ್ದ ವೀರಣ್ಣ ತಮ್ಮದೇ ಆದ ‘ನಾಟಕ ಕಲಾ ಮಿತ್ರ ಮಂಡಳಿ’ ಕಂಪೆನಿಯನ್ನು ಆರಂಭಿಸಿ ಎರಡು ದಶಕಕ್ಕೂ ಹೆಚ್ಚಿನ ಕಾಲ ನಡೆಸಿದ್ದು ಉಲ್ಲೇಖಾರ್ಹ. ರಂಗಭೂಮಿಯಲ್ಲಿ ಸಿಹಿಗಿಂತ ಕಹಿಯನ್ನು ಹೆಚ್ಚು ಉಂಡಿದ್ದ ವೀರಣ್ಣ 1980ರಲ್ಲಿ ಸರಕಾರದಿಂದ ಏನಾದರೂ ನೆರವು ದೊರೆಯಬಹುದೆಂಬ ಆಸೆ ಹೊತ್ತು ಬೆಂಗಳೂರಿನತ್ತ ಹೆಜ್ಜೆ ಹಾಕಿದರು. ಬದಲಾದ ಪರಿಸ್ಥಿತಿಯಲ್ಲಿ ರಂಗಭೂಮಿಯಿಂದ ಜಾನಪದ ರಂಗಕ್ಕೆ ದಿಕ್ಕು ಬದಲಾಯಿಸಿದ್ದು ರೋಚಕ.
ತಮ್ಮ ಪೂರ್ವಜರ ಕಲೆ ತೊಗಲುಬೊಂಬೆಯಾಟದತ್ತ ಮುಖ ಮಾಡಿದ್ದು ವೈಶಿಷ್ಟವೇ ಸರಿ. ಅಂದಿನ ಕನ್ನಡ ಮತ್ತು ಸಂಸ್ಕತಿ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ವಿಜಯ ಸಾಸನೂರರು ಕರ್ನಾಟಕದ ಅಪರೂಪದ ಕಲೆಯಾದ ತೊಗಲು ಗೊಂಬೆಯಾಟವನ್ನು ಪುನರ್ ಜೀವನಗೊಳಿಸಲು ಸಲಹೆ ನೀಡಿದರು. ಸಾಸ್‌ನೂರ್‌ರ ಮಾತುಗಳಿಂದ ಪ್ರೇರಿತರಾದ ವೀರಣ್ಣ ತಮ್ಮ ಹತ್ತಿರದ ಸಂಬಂಧಿ ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಕೃತ ತೊಗಲು ಬೊಂಬೆ ಕಲಾವಿದ ದಿ. ಹೂಲೆಪ್ಪರ ಸಹಕಾರ ದಿಂದ ಕೆಲವೇ ದಿನಗಳಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಮಾಯಣ ಕಥಾಪ್ರಸಂಗ ‘ಪಂಚವಟಿ’ ತೊಗಲುಗೊಂಬೆ ಯಾಟ ಪ್ರದರ್ಶಿಸುವ ಮೂಲಕ ದಾಖಲೆಯನ್ನೆ ನಿರ್ಮಿಸಿದರು.
ಕೇಂದ್ರ ಸಂಗೀತ ನಾಟಕ ಅಕಾಡಮಿ ಅಧ್ಯಕ್ಷೆ ಕಮಲಾದೇವಿ ಚಟ್ಟೋಪಾಧ್ಯಾಯ ನವರು ನೀಡಿದ ಪ್ರೋತ್ಸಾಹ, ಆರ್ಥಿಕ ಸಹಾಯ ಮತ್ತು ಅಂದಿನ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಡಾ.ಎಚ್. ಎಲ್. ನಾಗೇಗೌಡರ ಸಲಹೆ ಮತ್ತು ಪ್ರೋತ್ಸಾಹಗಳಿಂದ ವೀರಣ್ಣರ ತೊಗಲುಗೊಂಬೆಯಾಟ ಸಮರ್ಥ ರೀತಿಯಲ್ಲಿ ನೆಲೆ ನಿಲ್ಲಲು ಕಾರಣವಾಯಿತು. ಇದೇ ಸಂದರ್ಭದಲ್ಲಿ ಶ್ರೀರಾಮಾಂಜನೇಯ ತೊಗಲು ಗೊಂಬೆ ಮೇಳವನ್ನು ಆರಂಭಿಸಿದ ವೀರಣ್ಣ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಸಾಹಿತಿ ವೈ. ರಾಘವೇಂದ್ರ ರಾವ್ ಮತ್ತು ಸಂಡೂರಿನ ನಾಡೋಜ ವಿ.ಟಿ. ಕಾಳೆಯವರ ಸಹಾಯದಿಂದ ಅವರ ಪೂರ್ಣ ಕುಟುಂಬ ಗೊಂಬೆ ಕಲಾವಿದರಾಗಿ ರೂಪಗೊಂಡಿತು. ವೀರಣ್ಣರ ಪತ್ನಿ ಮಹಾಲಿಂಗಮ್ಮ, ಮಕ್ಕಳು, ಮೊಮ್ಮಕಳು ವೀರಣ್ಣನವರಿಗೆ ಶಕ್ತಿ ತುಂಬಿದವರು.
ನಾಡಿನ ಹಿರಿಯ ವಿದ್ವಾಂಸರಾದ ಡಾ. ಎಂ.ಎಂ. ಕಲ್ಬುರ್ಗಿ ಮತ್ತು ಡಾ. ಎಚ್.ಜೆ. ಲಕ್ಕಪ್ಪ ಗೌಡರು ವೀರಣ್ಣನವ ರಿಗೆ ಸಾಹಿತ್ಯವನ್ನೊದಗಿಸಿ ಹತ್ತು ಹಲವು ಪ್ರಯೋಗಗಳ ಯಶಸ್ವಿಗೆ ಕಾರಣರಾಗಿದ್ದಾರೆ.ಕೇಂದ್ರ ಸಂಗೀತ ನಾಟಕ ಅಕಾಡಮಿ ಅಧ್ಯಕ್ಷರಾಗಿದ್ದ ಪ್ರಸಿದ್ಧ ನಾಟಕಕಾರ ಗಿರೀಶ್ ಕಾರ್ನಾಡರು ‘ಭಾರತ ಸ್ವತಂತ್ರ ಸಂಗ್ರಾಮ’ ತೊಗಲುಗೊಂಬೆಯಾಟಕ್ಕೆ ಪ್ರೋತ್ಸಾಹಿಸಿದ ಪರಿಣಾಮ ವೀರಣ್ಣನವರ ಗೊಂಬೆಯಾಟ ಕೇವಲ ಪೌರಾಣಿಕ ಪ್ರಸಂಗಗಳಿಗೆ ಮೀಸ ಲಾಗದೆ ಐತಿಹಾಸಿಕ ಮತ್ತು ಸಾಮಾಜಿಕ ಕಥಾ ಪ್ರಸಂಗಗಳನ್ನೊಳಗೊಂಡು ವ್ಯಾಪಕವಾಗಿ ಬೆಳೆಯಲು ಸಹಕಾರಿಯಾಯಿತು.
ಮುಖ್ಯವಾದ ಕಥಾ ಪ್ರಸಂಗಗಳು:ಭಾರತ ಸ್ವತಂತ್ರ ಸಂಗ್ರಾಮ, ಬಾಪು ಪ್ರವಾದಿ ಬಸವೇಶ್ವರ, ಕಿತ್ತೂರು ಚೆನ್ನಮ್ಮ ಪ್ರಸಂಗಗಳ ಲ್ಲದೆ ಜನತೆಯಲ್ಲಿ ಕೃಷಿ ಮತ್ತು ಆರೋಗ್ಯ ಜಾಗೃತಿ ಮೂಡಿಸುವ ಸಾಕ್ಷರತಾ ಆಂದೋಲನ, ಕಬ್ಬಿನ ಬೆಳೆ, ಕುಟುಂಬ ನಿಯಂತ್ರಣ ಯೋಜನೆ, ತಾಯಿ ಮತ್ತು ಮಗುವಿನ ಆರೋಗ್ಯ (ಆರ್.ಸಿ.ಎಚ್.), ಏಡ್ಸ್ ಜನಜಾಗತಿ, ಪಲ್ಸ್ ಪೋಲಿಯೋ. (ಪೋಲಿಯೋ ನಿಯಂತ್ರಣ), ಮಲೇರಿಯ, ಡೇಂಗ್ಯು ಜ್ವರ. ಮದ್ಯ ವ್ಯಸನ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತು ತಮ್ಮ ತೊಗಲು ಗೊಬೆಯಾಟದ ಮೂಲಕ ಜನರಿಗೆ ಅರಿವು ಮೂಡಿಸುವಲ್ಲೂ ವೀರಣ್ಣ ಸಫಲರಾಗಿದ್ದಾರೆ.ಹಳೆಯ ಸಾಂಪ್ರದಾಯಿಕ ಕಲೆಯನ್ನು ಹೇಗೆ ಹೊಸ ಪ್ರಯೋಗಗಳಿಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಮೇಲಿನ ಈ ಪ್ರಯೋಗಗಳೇ ಸಾಕ್ಷಿಯಾಗಿವೆ.
ಸದಾ ಹೊಸತನ, ಪ್ರಯೋಗಗಳತ್ತ ಮುಖ ಮಾಡುವ ವೀರಣ್ಣ, ಗೌತಮ ಬುಧ್ದ, ವಿವೇಕಾನಂದ, ಅಂಬೇಡ್ಕರ್ ರೂಪಕಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ. ರಾಷ್ಟ್ರಕವಿ ಕುವೆಂಪುರ ‘ಕಾನೀನ’, ಶ್ರೀ ರಾಮಾಯಣ ದರ್ಶನಂ ಕೃತಿಯ ‘ಲಂಕಾದಹನಂ’ ರೂಪಕ ವನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.
ವಿದೇಶಗಳಲ್ಲೂ ಪ್ರದರ್ಶನ:2008ರಲ್ಲಿ ಸ್ವಿಝರ್‌ಲ್ಯಾಂಡ್‌ಗೆ ಪ್ರವಾಸ ಕೈಗೊಂಡು, ಜೂರಿಕ್ ನಗರದ ರೈಟ್ ಬರ್ಗ್ ಮ್ಯೂಸಿಯಂನಲ್ಲಿ ರಾಮಾಯಣದ ಪಂಚವಟಿ ಪ್ರಸಂಗದ ‘ಸೀತಾಪಹರಣ’ ಪ್ರಸಂಗ ಮತ್ತು ಮಹಾತ್ಮ ಗಾಂಧೀಜಿಯವರ ಕಥೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಇದೀಗ ಜರ್ಮನಿ ಪ್ರವಾಸ ಕೈಗೊಂಡಿರುವ ಬೆಳಗಲ್ ವೀರಣ್ಣ ಭಾರತದ ಗರಿಮೆ ಹಿರಿಮೆಯನ್ನು ಸಾರುತ್ತಿದ್ದಾರೆ.ಹೊಸದಿಲ್ಲಿಯ ರಾಷ್ಟ್ರಪತಿ ಭವನ, ಅಪ್ನಾ ಉತ್ಸವ್, ಚಂಡೀಗಢದ ಪಂಜಾಬ್ ವಿಶ್ವ ವಿದ್ಯಾನಿಲಯ, ಗಾಂಧಿ ಸ್ಮತಿ ಮತ್ತು ದರ್ಶನ ಸಮಿತಿ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಬಿಹಾರ್, ಮಹಾರಾಷ್ಟ್ರ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ.
ಪ್ರಶಸ್ತಿ, ಪುರಸ್ಕಾರಗಳು:1992ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1991ರಲ್ಲಿ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, 2000ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, 2007ನೆ ಸಾಲಿನಲ್ಲಿ ಜಾನಪದಶ್ರೀ ಪ್ರಶಸ್ತಿ ಲಭಿಸಿವೆ. ಜತೆಗೆ ವೀರಣ್ಣರು ಎರಡು ಅವಧಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಸದಸ್ಯರಾಗಿಯೂ ಜಾನಪದ ಕ್ಷೇತ್ರಕ್ಕೆ ಮತ್ತಷ್ಟು ಸೇವೆ ಸಲ್ಲಿಸಿದ್ದಾರೆ.ಕೇಂದ್ರ ಸಂಗೀತ, ನಾಟಕ ಅಕಾಡಮಿಯ 2011ನೆ ಸಾಲಿನ ಪುರಸ್ಕಾರಕ್ಕೆ ಇತರ ಸಾಂಪ್ರದಾಯಿಕ/ಜಾನಪದ/ಬುಡ ಕಟ್ಟು ನೃತ್ಯ/ ತೊಗಲುಬೊಂಬೆಯಾಟ ಕ್ಷೇತ್ರ ದಲ್ಲಿ ದೇಶದ 8 ಜನ ಪ್ರತಿಭಾವಂತ ಕಲಾವಿ ದರು ಆಯ್ಕೆಯಾಗಿದ್ದು, ಈ ಎಂಟು ಜನರಲ್ಲಿ ಬಳ್ಳಾರಿಯ ಹಿರಿಯ ಪ್ರತಿಭಾವಂತ, ಸಾಧಕ ಬೆಳಗಲ್ಲು ವೀರಣ್ಣ ಕೂಡ ಒಬ್ಬರಾಗಿರುವುದು ಕರ್ನಾಟಕ ಜಾನಪದಕ್ಕೆ, ಕನ್ನಡಿಗರಿಗೆ, ವಿಶೇಷವಾಗಿ ಬಳ್ಳಾರಿಗರಿಗೆ ಹೆಮ್ಮೆ ಎನಿಸಿದೆ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...