
ವಿದೇಶದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಸೋಲಿನ ಹಿನ್ನೆಲೆಯಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವವನ್ನು ಬಿಟ್ಟುಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ.ಧೋನಿ ಸೋಲಿನ ನೈತಿಕ ಹೊಣೆ ಹೊತ್ತು ತನ್ನ ಜವಾಬ್ದಾರಿಯನ್ನು ಬಿಟ್ಟುಕೊಡುವುದಾಗಿ ಹೇಳಿಲ್ಲ. ತಂಡವನ್ನು ಯಾರಾದರೂ ಮುನ್ನಡೆಸಲು ಸಮರ್ಥ ನಾಯಕರು ಇದ್ದರೆ ತಾನು ನಾಯಕತ್ವವನ್ನು ಬಿಟ್ಟುಕೊಡುವುದಾಗಿ ಹೇಳಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾದಲ್ಲಿ ತನ್ನನ್ನು ಹೊರತುಪಡಿಸಿದರೆ ನಾಯಕತ್ವ ವಹಿಸಿಕೊಳ್ಳಲು ಸಮರ್ಥ ಇನ್ನೊಬ್ಬ ಆಟಗಾರ ಇಲ್ಲ ಎನ್ನುವ ವಿಚಾರ ಅವರಿಗೆ ಚೆನ್ನಾಗಿ ಗೊತ್ತು.ಯಾಕೆಂದರೆ ಉಪ ನಾಯಕರಾಗಿರುವ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಧೋನಿ ಅನುಪಸ್ಥಿತಿಯಲ್ಲಿ ಅಂತಿಮ ಟೆಸ್ಟ್‌ನಲ್ಲಿ ತಂಡದ ಸಾರಥ್ಯ ವಹಿಸಿದ್ದ ಸೆಹ್ವಾಗ್ ಅವರಿಂದ ಜಾದೂ ನಡೆಯಲಿಲ್ಲ. ವೈಟ್‌ವಾಶ್ ತಪ್ಪಿಸಲು ಸಾಧ್ಯವಾಗಲಿಲ್ಲ. ಧೋನಿ ನಾಯಕತ್ವದಲ್ಲಿ ಭಾರತ 7 ಟೆಸ್ಟ್‌ಗಳನ್ನು ಸೋತರೆ, ಸೆಹ್ವಾಗ್ ನಾಯಕತ್ವದಲ್ಲಿ ಭಾರತ 1 ಟೆಸ್ಟ್ ಕಳೆದುಕೊಂಡಿದೆ. ಧೋನಿ ಟೆಸ್ಟ್ ನಾಯಕತ್ವವನ್ನು ಬಿಟ್ಟು ಕೊಡುವ ನಿರ್ಧಾರವನ್ನು ಪ್ರಕಟಿಸಿದ ಬೆನ್ನಲ್ಲೆ ಮಾಜಿ ನಾಯಕರು ಧೋನಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಅವರ ನಾಯಕತ್ವವನ್ನು ಸಮರ್ಥಿಸಿಕೊಂಡಿದ್ದಾರೆ
ಇಲ್ಲಿ ಗಮನಿಸತಕ್ಕ ವಿಚಾರವೆಂದರೆ ಧೋನಿ ಬಳಿಕ ತಂಡಕ್ಕೆ ಪರ್ಯಾಯ ನಾಯಕತ್ವ ನೀಡುವ ಇನ್ನೊಬ್ಬ ಆಟಗಾರ ಟೀಮ್ ಇಂಡಿಯಾದಲ್ಲಿ ರೂಪುಗೊಂಡಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಧೋನಿಯ ಕೈಯಲ್ಲಿರುವ ಟೆಸ್ಟ್ ನಾಯಕತ್ವವನ್ನು ಕಿತ್ತುಕೊಳ್ಳುವುದು ಯಾರಿಗೂ ಬೇಕಾಗಿಲ್ಲ. ತಕ್ಷಣ ಟೀಮ್ ಇಂಡಿಯಾಕ್ಕೆ ಟೆಸ್ಟ್ ಸರಣಿ ಇಲ್ಲ. ಕೆಲವು ದಿನಗಳ ಹಿಂದೆ ಟೆಸ್ಟ್ ಸೋಲಿನ ಹಿನ್ನೆಲೆಯಲ್ಲಿ ತಂಡದ ಹಿರಿಯ ಆಟಗಾರರು ನಿವೃತ್ತಿಯ ಬಗ್ಗೆ ಮಾತನಾಡಿದಾಗ, ಹಿರಿಯ ಆಟಗಾರರು ತಮ್ಮ ಭವಿಷ್ಯದ ಬಗ್ಗೆ ಆತುರವಾಗಿ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯತೆ ಇಲ್ಲ ಎಂದು ಧೋನಿ ಸಲಹೆ ನೀಡಿದ್ದರು. ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ವಿವಿಧ ತಂಡಗಳ ಸಾಧನೆ ಹಾಗೂ ವೈಫಲ್ಯದ ಬಗ್ಗೆ ಗಮನಿಸಿದಾಗ ತಂಡದ ಯಶಸ್ಸಿನಲ್ಲಿ ನಾಯಕನ ಪಾತ್ರ ದೊಡ್ಡದು ಎನ್ನುವ ವಿಚಾರವನ್ನು ಗಮನಿಸಬಹುದಾಗಿದೆ.ನಾಯಕನಾದವನು ದೊಡ್ಡ ಕೊಡುಗೆ ನೀಡಿದರೆ ಆ ತಂಡ ಯಶಸ್ವಿಯಾಗುತ್ತದೆ. ಒಂದು ವೇಳೆ ನಾಯಕ ಎಡವಿದರೆ ಆತನ ತಂಡ ಹೀನಾಯ ಸೋಲು ಅನುಭವಿಸುತ್ತಿರುವುದನ್ನು ವಿಶ್ವ ಕ್ರಿಕೆಟ್‌ನಲ್ಲಿ ನಾವಿಂದು ನೋಡಬಹುದಾಗಿದೆ.
ಕಳೆದ ವಿಶ್ವಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಸಚಿನ್, ಸೆಹ್ವಾಗ್ ವೈಫಲ್ಯ ಅನುಭವಿಸಿದಾಗ ನಾಯಕ ಧೋನಿ ತನ್ನ ಆಕರ್ಷಕ ಬ್ಯಾಟಿಂಗ್ ಮೂಲಕ ದೊಡ್ಡ ಕೊಡುಗೆ ನೀಡಿ ಟೀಮ್ ಇಂಡಿಯಾಕ್ಕೆ ವಿಶ್ವಕಪ್ ತಂದುಕೊಟ್ಟರು.ಸ್ಪಾಟ್ ಫಿಕ್ಸಿಂಗ್ ಹಗರಣ ಹಾಗೂ ತಂಡದ ಹಿರಿಯ ಆಟಗಾರರ ನಡುವಿನ ಗುಂಪುಗಾರಿಕೆಯಿಂದಾಗಿ ತತ್ತರಿಸಿದ್ದ ಪಾಕಿಸ್ತಾನ ತಂಡಕ್ಕೆ ಸಮರ್ಥ ನಾಯಕತ್ವ ನೀಡಿದ ಶಾಹಿದ್ ಅಫ್ರಿದಿ ತಂಡವನ್ನು ವಿಶ್ವಕಪ್‌ನಲ್ಲಿ ಸೆಮಿಫೈನಲ್ ತನಕ ಮುನ್ನಡೆಸಿದರು. ಶ್ರೀಲಂಕಾ ತಂಡ ಫೈನಲ್ ತಲುಪುವಲ್ಲೂ ನಾಯಕ ಕುಮಾರ ಸಂಗಕ್ಕರ ದೊಡ್ಡ ಕೊಡುಗೆ ನೀಡಿದ್ದರು.
ಇಂಗ್ಲೆಂಡ್‌ನಲ್ಲಿ ಕಳೆದ ವರ್ಷ ನಡೆದ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ನಾಯಕ ಏಂಡ್ರೊ ಸ್ಟ್ರಾಸ್ ಕೊಡುಗೆ ತಂಡಕ್ಕೆ 4-0 ಗೆಲುವಿನೊಂದಿಗೆ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1ಪಟ್ಟಕ್ಕೆ ತಲುಪಿಸಿತು. ಈ ಸರಣಿಯ ಬಳಿಕ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಧೋನಿ ಪಡೆ ಅಲೆಸ್ಟೆರ್ ಕುಕ್ ನೇತೃತ್ವದ ಇಂಗ್ಲೆಂಡ್‌ಗೆ 5-0 ಅಂತರದಲ್ಲಿ ಸೋಲುಣಿಸಿತು. ಪ್ರತಿಯೊಂದು ಪಂದ್ಯಗಳಲ್ಲೂ ಆಂಗ್ಲರ ಲೆಕ್ಕಚಾರವನ್ನು ತಲೆಕೆಳಗಾಗಿಸಿದ ಧೋನಿ ಐದು ಪಂದ್ಯಗಳಲ್ಲೂ ಅಜೇಯರಾಗಿ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಇತ್ತೀಚೆಗೆ ನಡೆದ ಆಸ್ಟ್ರೇಲಿಯ ಟೆಸ್ಟ್ ಸರಣಿಯಲ್ಲೂ ನಾಯಕ ಮೈಕಲ್ ಕ್ಲಾರ್ಕ್ ಭಾರತದ ವಿರುದ್ಧ ಬ್ಯಾಟಿಂಗ್‌ನಲ್ಲಿ ನೀಡಿದ ಅಪೂರ್ವ ಕೊಡುಗೆ ಆಸ್ಟ್ರೇಲಿಯಕ್ಕೆ 4-0 ಅಂತರದ ಯಶಸ್ಸು ತಂದುಕೊಟ್ಟಿತು. ಬ್ಯಾಟ್ಸ್‌ಮನ್‌ಗಳಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಡೇವಿಡ್ ವಾರ್ನರ್, ಮೈಕಲ್ ಹಸ್ಸಿ, ಎಡ್ ಕೋವನ್ ಮತ್ತು ಬೌಲರ್‌ಗಳಾದ ಪೀಟರ್ ಸಿಡ್ಲ್, ಬೆನ್ ಹಿಲೆನ್ಹಾಸ್, ಹ್ಯಾರಿಸ್ ಮತ್ತು ಲಿನ್ ಅವರು ನಾಯಕ ಕ್ಲಾರ್ಕ್‌ಗೆ ಪ್ರತಿಯೊಂದು ಪಂದ್ಯದಲ್ಲೂ ತಮ್ಮ ಕೈಲಾದಷ್ಟು ನೆರವು ನೀಡಿದರು. ಆಸ್ಟ್ರೇಲಿಯ ಸಂಘಟಿತ ಪ್ರಯತ್ನದ ಫಲವಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಜಯಿಸಿತು.
ಆಸ್ಟ್ರೇಲಿಯದಲ್ಲಿ ಸೋಲಿನ ಕಾರಣಕ್ಕಾಗಿ ನಾಯಕ ಧೋನಿಯನ್ನು ಮಾತ್ರ ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ. ಸೋಲಿನಲ್ಲಿ ತಂಡದ ಸಹ ಆಟಗಾರರ ಪಾಲು ಇದೆ. ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ವೈಫಲ್ಯ ತಂಡದ ಹೀನಾಯ ಸೋಲಿಗೆ ಕಾರಣವಾಯಿತು.ನೂರನೆ ಅಂತಾರಾಷ್ಟ್ರೀಯ ಶತಕ ಸಿಡಿಸುವ ಕನಸಿನೊಂದಿಗೆ ಆಸ್ಟ್ರೇಲಿಯ ನೆಲಕ್ಕೆ ಕಾಲಿರಿಸಿದ್ದ ಸಚಿನ್ ಯಶಸ್ವಿಯಾಗಲಿಲ್ಲ ಮತ್ತು ತಂಡ ಸೋಲಿನ ಅಂಚಿಗೆ ಸಿಲುಕಿದಾಗ ತಂಡವನ್ನು ಅಪಾಯದಿಂದ ಪಾರು ಮಾಡಲು ಅವರು ಶ್ರಮಿಸಲಿಲ್ಲ.
ಧೋನಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು ಎನ್ನುವುದು ನಿಜ.ಆದರೆ ತಂಡದ ಸಹ ಆಟಗಾರರು ಅವರಿಗೆ ನಂಬಿಸಿ ಕೈಕೊಟ್ಟರು.ಕೋಚ್ ಡಂಕನ್ ಫ್ಲೇಚರ್ ಸರಿಯಾದ ಮಾರ್ಗದರ್ಶನ ನೀಡುವಲ್ಲಿ ಎಡವಿದರು.ಟೆಸ್ಟ್ ಸರಣಿಯ ಸೋಲಿನ ಬಳಿಕ ನಡೆದ ಟ್ವೆಂಟಿ -20 ಮೊದಲ ಪಂದ್ಯದಲ್ಲೂ ಭಾರತ ಗೆಲ್ಲಲಿಲ್ಲ. ನಾಯಕ ಧೋನಿ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಆದರೆ ತಂಡದ ಸಹ ಆಟಗಾರರು ಅವರ ಹೋರಾಟಕ್ಕೆ ಸಾಥ್ ನೀಡಲಿಲ್ಲ.ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ಗೆ ವೈಟ್ ವಾಶ್ ಮಾಡಲು ತಯಾರಾಗಿದೆ. ತನ್ನ ತವರಲ್ಲಿ ಭಾರತದ ವಿರುದ್ಧ ಟೆಸ್ಟ್‌ನಲ್ಲಿ ಯಶಸ್ಸಿನ ತುತ್ತತುದಿಗೇರಿದ್ದ ಇಂಗ್ಲೆಂಡ್ ಇದೀಗ ಭಾರತದಂತೆ ಸತತ ವೈಫಲ್ಯದೊಂದಿಗೆ ನಿಧಾನವಾಗಿ ಕೆಳಗಿಳಿಯುತ್ತಿದೆ. ನಂ.1ಪಟ್ಟವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. ಆಸ್ಟ್ರೇಲಿಯ ಇಂಗ್ಲೆಂಡ್‌ನ ಕೈಯಲ್ಲಿರುವ ಪಟ್ಟವನ್ನು ಕಿತ್ತುಕೊಳ್ಳುವ ನಿಟ್ಟಿನಲ್ಲಿ ಯೋಚಿಸುತ್ತಿದೆ.
ಪಾಕಿಸ್ತಾನ ತಂಡ ತವರಲ್ಲಿ ಭದ್ರತೆಯ ಸಮಸ್ಯೆಯಿಂದಾಗಿ ಸರಣಿ ಆಯೋಜಿಸಲು ಸಮಸ್ಯೆ ಎದುರಿಸುತ್ತಿದ್ದರೂ, ಯುಎಇಯಲ್ಲಿ ಸರಣಿ ಆಯೋಜಿಸಿ ಯಶಸ್ಸಿನ ಹಾದಿಯಲ್ಲಿದೆ. ಮಿಶ್ಬಾ ಉಲ್ ಹಕ್ ನಾಯಕತ್ವದ ಪಾಕಿಸ್ತಾನ ತಂಡ ಈ ಹೊತ್ತು ಬಲಿಷ್ಠ ತಂಡವಾಗಿ ರೂಪುಗೊಳ್ಳುತ್ತಿದೆ. ತಂಡದ ಯಶಸ್ಸಿಗೆ ನಾಯಕ ಮಿಶ್ಬಾ ಉಲ್ ಹಕ್ ಕಠಿಣ ಶ್ರಮಕ್ಕೆ ಫಲ ನೀಡಿದೆ.ವಿದೇಶದಲ್ಲಿ ನಡೆದಿರುವ ಎರಡು ಟೆಸ್ಟ್ ಸರಣಿಗಳಲ್ಲಿ 0-8 ಸೋಲಿನೊಂದಿಗೆ ನಂ.3 ಸ್ಥಾನಕ್ಕೆ ಇಳಿಯುವ ಆತಂಕವನ್ನು ಎದುರಿಸುತ್ತಿ ರುವ ಟೀಮ್ ಇಂಡಿಯಾ ಜಗತ್ತಿನ ಬಲಿಷ್ಠ ತಂಡವಾಗಿ ಮತ್ತೆ ರೂಪುಗೊಳ್ಳಬೇಕಾದರೆ ತಂಡ ದಲ್ಲಿ ಕೆಲವೊಂದು ಬದಲಾವಣೆ ಅನಿವಾರ್ಯವಾಗಿದೆ.
ಆಯ್ಕೆ ಸಮಿತಿಯು ತಂಡದ ಆಯ್ಕೆಯ ವೇಳೆ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಆಟಗಾರರೊಂದಿಗೆ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರರನ್ನು ಪರಿಗಣಿಸಬೇಕಾಗಿದೆ.ಐಪಿಎಲ್‌ನಲ್ಲಿ ಬೆಳಕಿಗೆ ಬಂದ ಪ್ರತಿಭೆಗಳಿಗೆ ಏಕದಿನ ಮತ್ತು ಟ್ವೆಂಟಿ 20 ಪಂದ್ಯಗಳಿಗೆ ತಂಡದಲ್ಲಿ ಅವಕಾಶ ನೀಡಬಹುದು. ಆದರೆ ಅವರು ಟೆಸ್ಟ್ ತಂಡಗಳಲ್ಲಿ ಆಡಲು ಸಮರ್ಥರಲ್ಲ. ಟೆಸ್ಟ್ ತಂಡಕ್ಕೆ ರಣಜಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಆಯ್ಕೆ ಸಮಿತಿ ಯೋಚಿಸಬೇಕಾಗಿದೆ.
ಮುಗಿಸುವ ಮುನ್ನ: ಆಸ್ಟ್ರೇಲಿಯ ಸರಣಿ ಯಲ್ಲಿ ಟೀಮ್ ಇಂಡಿಯಾದ ಹೀನಾಯ ಸೋಲಿನ ಬಗ್ಗೆ ಬಿಸಿಸಿಐ ಪೋಸ್ಟ್ ಮಾರ್ಟಮ್ ನಡೆಸಿ, ತಂಡಕ್ಕೆ ಮೇಜರ್ ಸರ್ಜರಿ ನಡೆಸುವ ನಿಟ್ಟಿನಲ್ಲಿ ಯೋಚಿಸ ಬೇಕಾಗಿದೆ. ಯಾವುದೆ ಖಾಯಿಲೆಗೆ ಅದರ ಮೂಲವನ್ನು ಕಂಡು ಹುಡುಕಿ ಸರಿಯಾದ ಚಿಕಿತ್ಸೆಯನ್ನು ಸಕಾಲದಲ್ಲಿ ನೀಡಿದರೆ ಖಾಯಿಲೆಯನ್ನು ಗುಣಪಡಿಸಲು ಸಾಧ್ಯ. ಹಾಗೆಯೆ ಟೀಮ್ ಇಂಡಿಯಾದ ಸೋಲಿನ ಮೂಲವನ್ನು ಕಂಡು ಹುಡುಕಿ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...