ಹೋಮಾಯ್ ವ್ಯಾರಾವಾಲ ಅವ ರಿಗೆ 2011 ಡಿಸೆಂಬರ್ 9ರಂದು 98 ತುಂಬಿತು. ಹದಿನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಮುನ್ಸೂಚನೆ ನೀಡದೆಯೇ ಅವರನ್ನು ಭೇಟಿಯಾಗಲು ನಾನು ನಿರ್ಧ ರಿಸಿದೆ. ಹುಟ್ಟಿದ ದಿನದಂದು ಅವರಿಗೆ ಅಚ್ಚರಿ ನೀಡುವುದು ನನ್ನ ಉದ್ದೇಶವಾಗಿತ್ತು. ನಾನು ಮುನ್ನಾ ದಿನ ರಾತ್ರಿ ಬಂದಿಳಿದ ಕೂಡಲೇ ಅವರಿಗೆ ಮೊಬೈಲ್ ಮೂಲಕ ಎಸ್‌ಎಂಎಸ್ ಸಂದೇಶ ಕಳುಹಿಸಿದ್ದೆ. ಅದಕ್ಕೆ ಅವರಿಂದ ಉತ್ತರವೂ ಬಂದಿತ್ತು. ಅವರ ಎಸ್‌ಎಂಎಸ್ ಸಂದೇಶ ಹೀಗಿತ್ತು:
|
ಹೋಮಾಯ್ ವ್ಯಾರಾವಾಲ ತನ್ನ ಸ್ಪೀಡ್‌ಗ್ರಾಫಿಕ್ಕ್ಸ್ ಕ್ಯಾಮರಾದೊಂದಿಗೆ(1960) |
‘‘ಈಗಷ್ಟೆ ನಿನ್ನ ಎಸ್‌ಎಂ ಎಸ್ ತಲುಪಿತು. ಧನ್ಯವಾದಗಳು. ನಾಳೆ ನೋಡುತ್ತೇನೆ. ಪ್ರೀತಿ ಯಿರಲಿ’’. ಎರಡು ವರ್ಷಗಳ ಹಿಂದೆ ಹೋಮಾಯ್ ಇ-ಮೇಲ್ ಕಲಿಯುವ ಸಾಧ್ಯತೆಯನ್ನು ಪರಿಶೀ ಲಿಸಿದ್ದರು. ಆದರೆ ಇ-ಮೇಲ್‌ಗಿಂತ ಮೊಬೈಲ್‌ನಲ್ಲಿ ಎಸ್‌ಎಂಎಸ್ ಕಳುಹಿಸುವುದು ಉತ್ತಮ ಆಯ್ಕೆ ಎಂದು ಬಳಿಕ ನಿರ್ಧರಿಸಿದರು.
ಮೊಬೈಲ್‌ನಲ್ಲಿ ಎಸ್‌ಎಂಎಸ್ ಬರೆಯಲು ಅವರು ಕಷ್ಟಪಡುತ್ತಿದ್ದರು. ಯಾಕೆಂದರೆ, ಕೀಪ್ಯಾಡ್‌ನ ಚಿಕ್ಕ ಚಿಕ್ಕ ಬಟನ್‌ಗಳು ಎಷ್ಟೋ ಸಲ ಅವರಿಗೆ ತಪ್ಪಿ ಹೋಗುತ್ತಿದ್ದವು. ಆದರೆ, ಆಕೆ ದೃಢ ಮನಸ್ಸು ಮಾಡಿ ಎಸ್‌ಎಂಎಸ್ ಟೈಪ್ ಮಾಡುವುದನ್ನು ಕಲಿತರು. ಶೀಘ್ರವೇ ಆಕೆ ಸ್ನೇಹಿತರಿಗೆ ಎಸ್‌ಎಂಎಸ್ ಮಾಡಲು ಆರಂಭಿಸಿದರು. ಕೆಲವು ಸಲ ಗೊಂದಲಗಳನ್ನೂ ಉಂಟು ಮಾಡುತ್ತಿದ್ದರು. ಒಮ್ಮೆ ಸ್ನೇಹಿತರೊಬ್ಬರಿಗೆ ಕಳುಹಿಸಿದ ರಹಸ್ಯ ಎಸ್‌ಎಂಎಸ್ ಅವರನ್ನು ಗೊಂದಲದಲ್ಲಿ ಕೆಡವಿತು. ಆ ಸಂದೇಶ ಹೀಗಿತ್ತು: ‘‘ದಯವಿಟ್ಟು ಪೇಡ ಕಳುಹಿಸಿ!’’. ಆದರೆ, ಆ ಸಂದೇಶ ಬೇರೆಯವರಿಗೆ ಬರೆದದ್ದಾಗಿತ್ತು. ವ್ಯಾರಾವಾಲ ಕೈಗಳಿಗೆ ಪೆನ್ನು ನೀಡಿದರೆ ಅವರು ಸುಂದರವಾಗಿ ಅಕ್ಷರಗಳನ್ನು ಹೆಣೆಯುತ್ತಿದ್ದರು. ಅವರ ಕೈಬರಹ ಕೊನೆಯವರೆಗೂ ಸುಂದರವಾಗಿತ್ತು. ನನ್ನ ಕೈಬರಹದ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸುತ್ತಿದ್ದರು. ನಮ್ಮಿಬ್ಬರ ನಡುವೆ ನಡೆದ ಪತ್ರ ವ್ಯವಹಾರಗಳು ಅವರ ನಿರಾಶೆಯನ್ನು ಎತ್ತಿ ತೋರಿಸುತ್ತವೆ.
1997ರಲ್ಲಿ ಅವರು ಹೀಗೆ ಬರೆದರು: ‘‘ಪೋಸ್ಟ್‌ಮ್ಯಾನ್‌ಗೆ ಕಷ್ಟವಿಲ್ಲದೆ ವಿಳಾಸ ಓದಲು ಸಾಧ್ಯವಾಗಬೇಕು. ಅವರಿಗೆ ತುಂಬಾ ಪತ್ರಗಳನ್ನು ವಿತರಣೆ ಮಾಡಬೇಕಿದೆ. ಅವರ ಕೆಲಸ ಸುಲಭಗೊಳಿಸಲು ಪ್ರಯತ್ನಿಸಿ’’. 2005ರಲ್ಲಿ ಅವರು ಆರು ಸುಲಲಿತ ಮೊನೆಯ ಬಾಲ್ ಪಾಯಿಂಟ್ ರಿಫಿಲ್‌ಗಳನ್ನು ಕೇಳಿದರು. ‘‘ಅವರು ಇಲ್ಲಿ ಮಾರುತ್ತಿ ರುವ ರಿಫಿಲ್‌ಗಳು ಸರಿಯಾಗಿಲ್ಲ. ನನಗೆ ಇದರದ್ದೇ ಚಿಂತೆಯಾಗಿದೆ. ನನ್ನ ಅಕ್ಷರ ವಕ್ರವಾಗುತ್ತಿದೆ’’. 2006ರಲ್ಲಿ, ನಾನು ಏನು ಬರೆದಿದ್ದೇನೋ ಅದು ತನಗೆ ತಿಳಿಯುತ್ತಿಲ್ಲ ಎಂದು ಹೇಳಿ ನಾನು ಬರೆದ ಪತ್ರವೊಂದನ್ನು ಅವರು ವಾಪಸ್ ಕಳುಹಿಸಿದ್ದರು! ಆ ಬಳಿಕ ನಾನು ಆಕೆಗೆ ಟೈಪ್ ಮಾಡಿದ ಪತ್ರಗಳನ್ನು ಕಳುಹಿಸಲು ಆರಂಭಿಸಿದೆ. ಆಕೆ ತನ್ನ ಪತ್ರಗಳನ್ನು ಮರುಬಳಕೆ ಕಾಗದದ ಮೇಲೆ ಬರೆಯುತ್ತಿದ್ದರು
ಹಾಗೂ ಮರು ಬಳಕೆ ಲಕೋಟೆಗಳಲ್ಲಿ ಕಳುಹಿಸುತ್ತಿದ್ದರು. ಆಕೆಯ ಸುಂದರ ಅಕ್ಷರಗಳ ಪ್ರತಿಯೊಂದು ಪತ್ರವನ್ನು ನಾನು ಜೋಪಾನವಾಗಿ ಸಂಗ್ರಹಿಸಿಟ್ಟುಕೊಂಡಿದ್ದೇನೆ.
ವ್ಯಾರಾವಾಲ ಭಾರತದ ಮೊದಲ ಪತ್ರಿಕಾ ಛಾಯಾಗ್ರಾಹಕಿ (ಮಹಿಳಾ). ಅವರು ಸಂಕ್ರಮಣ ಘಟ್ಟದಲ್ಲಿರುವ ದೇಶವೊಂದರ ಮೊದಲ ಮೂರು ದಶಕಗಳ ಚಿತ್ರಗಳನ್ನು ಸೆರೆಹಿಡಿದರು. ವ್ಯಾರಾವಾಲರ ವೃತ್ತಿ ಬದುಕಿನ ಕೊಡುಗೆ ಬಗ್ಗೆ ಹಲವಾರು ಲೇಖನಗಳು ಮುಂದಕ್ಕೆ ಹೊರಬರ ಬಹುದು. ಈಗ ನನ್ನೊಂದಿಗಿರುವುದು ಓರ್ವ ಹಿರಿಯ ಹೋಮಾಯ್ ವ್ಯಾರಾವಾಲರ ನೆನಪುಗಳು. ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ಅವರ ವಯಸ್ಸು 87. ನೆನಪುಗಳನ್ನು ಕೆದಕಲು ಸ್ವಲ್ಪ ಕಸರತ್ತು ಮಾಡಬೇಕಿತ್ತಾದರೂ ಅವರ ನೆನಪುಗಳು ರೇಝರ್‌ನಷ್ಟು ಹರಿತ. ಅವರು ಒಬ್ಬ ತರಬೇತಿ ಪಡೆಯದ ಆದರೆ ಕೌಶಲಪೂರ್ಣ ಸಂಗ್ರಾಹಕಿ. ಅವರು ತನ್ನ ಸುಂದರ ಮೋನೋಕ್ರೋಮ್ (ಏಕ ಬಣ್ಣ) ಪ್ರಿಂಟ್‌ಗಳು ಮತ್ತು ನೆಗೆಟಿವ್‌ಗಳನ್ನು ಡಬ್ಬಗಳು ಮತ್ತು ಕೈಯಿಂದ ನಿರ್ಮಿತ ನೆಗೆಟಿವ್ ಜಾಕೆಟ್‌ಗಳಲ್ಲಿ ಶೇಖರಿಸಿಟ್ಟಿದ್ದರು. ಈ ಡಬ್ಬಗಳು ಮತ್ತು ಜಾಕೆಟ್‌ಗಳನ್ನು ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡುವ ಡಬ್ಬಗಳಲ್ಲಿ ಹಾಕಿಟ್ಟಿದ್ದರು. ಅವುಗಳನ್ನು ವಡೋದರದ ತೇವಾಂಶಭರಿತ ವಾತಾವರಣದಲ್ಲಿ ಕಾಪಿಡುವುದು ಅವರಿಗೆ ಯಾವತ್ತೂ ಒಂದು ಸಮಸ್ಯೆಯಾಗಿತ್ತು. ಅಂತಿಮವಾಗಿ ಅವುಗಳನ್ನು ದಿಲ್ಲಿಯ ಅಲ್ಕಾಝಿ ಫೌಂಡೇಶನ್‌ಗೆ ಹಸ್ತಾಂತರಿಸಿದ ಬಳಿಕ ನಿರುಮ್ಮಳರಾದರು.
ಎಲ್ಲದರಲ್ಲೂ ಉಪಯೋಗ ಕಾಣುತ್ತಿದ್ದರು
ಹೋಮಾಯ್ ಕೈಗೆ ಸಿಕ್ಕಿದ ಯಾವುದೇ ವಸ್ತು ನಿರುಪಯುಕ್ತವಾಗುತ್ತಿರಲಿಲ್ಲ. ಪ್ರತಿಯೊಂದೂ ಉತ್ತಮ ಕೆಲಸಕ್ಕೆ ಬಳಸಲ್ಪಡುತ್ತಿತ್ತು. ಅವರ ಸರಳ ಮತ್ತು ಅಚ್ಚುಕಟ್ಟಾದ ಮನೆಯಲ್ಲಿ ನದಿಯಲ್ಲಿ ತೇಲಿ ಬಂದ ಮರಗಳನ್ನು ಇಡಲಾಗಿತ್ತು. ಅವುಗಳು ಶಿಲ್ಪದಂತೆ ಕಾಣುತ್ತಿದ್ದವು. ಅವರ ವಾಕಿಂಗ್ ಸ್ಟಿಕ್ಕನ್ನು ಮರದ ತುಂಡೊಂದರಿಂದ ಕೊರೆಯಲಾಗಿತ್ತು; ಮನೆಯ ಹೆಸರಿನ ಪ್ಲೇಟನ್ನು ಒಡೆದ ಗಾಜಿನ ಬಳೆಗಳಿಂದ ತಯಾರಿಸಲಾಗಿತ್ತು. ಅವರ ಕೈಬರಹದ ಅಡುಗೆ ಮತ್ತು ಮನೆಮದ್ದಿನ ಪುಸ್ತಕವನ್ನು ಅವರನ್ನು ಬಲ್ಲ ಎಲ್ಲರೂ ಫೋಟೊಕಾಪಿ ಮಾಡಿ ಕೊಳ್ಳುತ್ತಿದ್ದರು. ಅವರು ತನ್ನ ತಲೆಗೂದಲನ್ನು ತಾನೇ ಕತ್ತರಿಸಿಕೊಳ್ಳುತ್ತಿದ್ದರು ಹಾಗೂ ತನ್ನ ಬಟ್ಟೆಗಳನ್ನು ತಾನೇ ಹೊಲಿಯುತ್ತಿದ್ದರು. ಒಮ್ಮೆ ಅಳತೆ ಮೀರಿದ್ದ ಅಡುಗೆ ಟ್ರೇಯೊಂದನ್ನು ಅವರು ಗರಗಸದಿಂದ ಸ್ವತಃ ತಾನೇ ಕುಯ್ದರು, ನನ್ನ ಚಪ್ಪಲನ್ನು ದುರಸ್ತಿ ಮಾಡಿದರು ಹಾಗೂ ನೀರಿನ ಟಾಂಕಿಯ ಪ್ಲಂಬಿಂಗನ್ನು ಸರಿಪಡಿಸಿದರು. ಇವುಗಳೆಲ್ಲವನ್ನು ಅವರು ತನ್ನ ಪ್ರಾಯದ 90ರ ದಶಕದಲ್ಲೂ ಮಾಡುತ್ತಿದ್ದರು.
ತಾನು ರಾಬಿನ್‌ಸನ್ ಕ್ರೂಸೊರಂತೆ ಎಂದು ಅವರು ಹಲವು ಸಲ ಹೇಳಿಕೊಳ್ಳುತ್ತಿದ್ದರು. ವಡೋದರದ ಅವರ ಮನೆ ಅವರ ದ್ವೀಪವಾಗಿತ್ತು. ಅಲ್ಲಿ ಅವರು ಕೊನೆಯವರೆಗೆ ತನ್ನ ಗಿಡಗಳು ಮತ್ತು ಕೆಲವು ಖಾಸಗಿ ಫೋಟೋಗಳೊಂದಿಗೆ ಸ್ವತಂತ್ರವಾಗಿ ಬದುಕಿದರು.
ವಡೋದರದಲ್ಲಿ ನಾನು ಅವರೊಂದಿಗೆ ಕಳೆದ ಸಮಯದಲ್ಲಿ ಫೋಟೋಗ್ರಫಿ ಬಗ್ಗೆ ಮಾತನಾಡುತ್ತಿದ್ದೆವು. ವರ್ಷಗಳು ಉರುಳುತ್ತಿದ್ದಂತೆ ಹಾಗೂ ನಾವು ಆತ್ಮೀಯರಾಗುತ್ತಾ ಹೋದಂತೆ ಇತಿಹಾಸದ ಘಟನೆಗಳ ಬಗ್ಗೆ ನಾವು ಚರ್ಚೆ ನಡೆಸಿದೆವು.
ಮಧ್ಯಮ ವರ್ಗದ ಪಾರ್ಸಿ ಕುಟುಂಬಕ್ಕೆ ಸೇರಿದ ಹೋಮಾಯ್ ತನ್ನ ಬದುಕಿನ ಹೆಚ್ಚಿನ ಅವಧಿಯಲ್ಲಿ ಹೋರಾಟವನ್ನೇ ನಡೆಸಬೇಕಾಯಿತು. ತಾನು ಛಾಯಾಚಿತ್ರಗ್ರಾಹಕಿ ಆಗಿರದಿದ್ದರೆ ಸಿಗುವ ಯಾವುದಾದರೂ ಬೇರೆ ವೃತ್ತಿ ಮಾಡುತ್ತಿದ್ದೆ ಎಂದು ಅವರು ನನ್ನ ಬಳಿ ಯಾವತ್ತೂ ಹೇಳುತ್ತಿದ್ದರು. ಕೆಲಸ ಮಾಡದೆ ಇರುವುದು ಯಾವತ್ತೂ ಅವರ ಜಾಯಮಾನವಾಗಿರಲಿಲ್ಲ. ಅವರ ತಂದೆ ಸಂಚಾರಿ ಉರ್ದು-ಪಾರ್ಸಿ ನಾಟಕ ತಂಡವೊಂದರಲ್ಲಿ ನಟರಾಗಿದ್ದರು. ರಂಗೂನ್‌ನಲ್ಲಿ ಅವರ ಕಂಪನಿ ದಿವಾಳಿ ಘೋಷಿಸಿತು. ಹಾಗಾಗಿ, ಭಾರತಕ್ಕೆ ಮರಳಲು ಅವರು ಸಾಲ ಮಾಡಬೇಕಾಯಿತು. ಅವರು ಶೀಘ್ರವೇ ಮೃತಪಟ್ಟರು. ಹೋಮಾಯ್ ತಾಯಿ ‘ಪಾರ್ಸಿ ಕುಸ್ತಿ’ (ಪವಿತ್ರ ದಾರ)ಗಳನ್ನು ನೇಯುವ ಮೂಲಕ ಕುಟುಂಬದ ವರಮಾನವನ್ನು ಹೆಚ್ಚಿಸಿದರು. ಹೋಮಾಯ್ ತಾನು ಕಲಿತ ಗುಜರಾತಿ ಶಾಲೆಯ ತನ್ನ ತರಗತಿಯಲ್ಲಿ ಒಬ್ಬಳೇ ಹುಡುಗಿಯಾಗಿದ್ದರು.
ಅವರು ಸೇಂಟ್ ಝೇವಿಯರ್ ಕಾಲೇಜಿನಿಂದ ಡಿಪ್ಲೊಮಾ ಪದವಿ ಪಡೆದರು. ಅವರು ಬಳಿಕ ಬಾಂಬೆಯ ಜೆ. ಜೆ. ಕಲಾ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದರು. ಇಲ್ಲಿ ಅವರು ತನ್ನ ಅನೇಕ ಆರಂಭಿಕ ಚಿತ್ರಗಳಿಗೆ ವಿಷಯಗಳನ್ನು ಕಂಡುಕೊಂಡರು.
ಹೋಮಾಯ್ ತನ್ನ ಪ್ರಿಯತಮ ಮಾನೆಕ್‌ಶಾರಿಂದ ಫೋಟೋಗ್ರಫಿ ಕಲಿತರು. ಬಳಿಕ ಅವರು ಮದುವೆಯಾದರು. ಅವರಿಬ್ಬರು 1930ರ ದಶಕದಲ್ಲಿ ಮತ್ತು 1940ರ ದಶಕದ ಆರಂಭಿಕ ವರ್ಷಗಳಲ್ಲಿ ಬಾಂಬೆಯ ರಸ್ತೆಗಳಲ್ಲಿ ಜೊತೆಯಾಗಿ ಹೆಜ್ಜೆಗಳನ್ನು ಹಾಕುತ್ತಾ ಚಿತ್ರಗಳನ್ನು ತೆಗೆದರು.
1942ರಲ್ಲಿ ಅವರು ದಿಲ್ಲಿಗೆ ತೆರಳಿದರು ಹಾಗೂ ‘ಬ್ರಿಟಿಶ್ ಇನ್‌ಫಾರ್ಮೇಶನ್ ಸರ್ವಿಸಸ್’ನ ನೌಕರರಾಗಿ ಅವರು ರಾಷ್ಟ್ರೀಯ ರಾಜಕಾರಣದ ಪ್ರವಾಹಕ್ಕೆ ಧುಮುಕಿದರು. ಹೋಮಾಯ್ ಇತಿಹಾಸದ ಅಧಿಕೃತ ಘಟನೆಗಳನ್ನು ಸೆರೆಹಿಡಿದರು. ಅದೇ ವೇಳೆ, ಪ್ರತಿಷ್ಠಿತರು ಸೇರುವ ದಿಲ್ಲಿಯ ಜಿಂಖಾನ ಕ್ಲಬ್‌ನಲ್ಲಿ ನಡೆಯುವ ಸಮಾರಂಭಗಳ ಚಿತ್ರಗಳನ್ನೂ ತೆಗೆದರು.
ಸಾಹಸಿ
ಹೋಮಾಯ್ ಓರ್ವ ಸಾಹಸಿ ಮಹಿಳೆ. 1959ರಲ್ಲಿ ಯುವ ದಲಾಯಿ ಲಾಮಾ ಗಡಿ ದಾಡಿ ಬರುವ ಚಿತ್ರಗಳನ್ನು ತೆಗೆದ ಬಳಿಕ ಅವರು ಸಿಕ್ಕಿಂನಲ್ಲಿ ಸಿಕ್ಕಿಹಾಕಿಕೊಂಡರು. ಆಗ ಸೇನೆಯ ವಾಹನವೊಂದಕ್ಕೆ ಆತುಕೊಂಡು ದಿಲ್ಲಿಗೆ ಹಿಂದಿರುಗಿದರು.
1947ರಲ್ಲಿ ಮುಹಮ್ಮದಾಲಿ ಜಿನ್ನಾ ಪಾಕಿಸ್ತಾನಕ್ಕೆ ತೆರಳುವ ಮುನ್ನಾ ದಿನ ದಿಲ್ಲಿಯಲ್ಲಿ ನಡೆಸಿದ ತನ್ನ ಕೊನೆಯ ಪತ್ರಿಕಾಗೋಷ್ಠಿಯ ವೇಳೆ ಅವರ ಭಾವಚಿತ್ರ ತೆಗೆಯುವ ಭರದಲ್ಲಿ ಹೋಮಾಯ್ ಕೆಳಗೆ ಬಿದ್ದು ಬಿಟ್ಟರು. ಈ ಘಟನೆ ಜಿನ್ನಾ ಮುಖದಲ್ಲೂ ನಗು ತರಿಸಿತು. ದೇಶ ವಿಭಜನೆಯನ್ನು ಅನುಮೋದಿಸಲು ಕಾಂಗ್ರೆಸ್ ಕ್ರಿಯಾ ಸಮಿತಿ ನಡೆಸಿದ ಸಭೆಯ ಚಿತ್ರವನ್ನೂ ಅವರು ತೆಗೆದಿದ್ದಾರೆ. ಸಭೆಯ ಅಧ್ಯಕ್ಷತೆ ವಹಿಸಿದ್ದ ಆಚಾರ್ಯ ಕೃಪಲಾನಿಗೆ ತಮ್ಮಾಂದಿಗೆ ಪತ್ರಕರ್ತರು ಇರುವುದು ಬೇಕಿರಲಿಲ್ಲ. ಹಾಗಾಗಿ, ಹೋಮಾಯ್ ಬೆಂಚ್‌ಗಳ ಹಿಂದೆ ಬಗ್ಗಿ ಕುಳಿತುಕೊಳ್ಳಬೇಕಾಯಿತು.
2008ರಲ್ಲಿ ತನ್ನ 95ನೆ ವಯಸ್ಸಿನಲ್ಲಿ ಅವರು ಅಮೆರಿಕ ಮತ್ತು ಬ್ರಿಟನ್ ಪ್ರವಾಸ ಕೈಗೊಂಡದ್ದು ಅವರ ಜೀವನೋತ್ಸಾಹಕ್ಕೆ ಹಿಡಿದ ಕನ್ನಡಿಯಾಗಿತ್ತು. ಟ್ಯಾವಿಸ್ಟೋಕ್ ಪಾರ್ಕ್‌ನಲ್ಲಿ ಗಾಂಧಿ ಪ್ರತಿಮೆಯನ್ನು ನೋಡಿದಾಗ ಅವರ ಮೊದಲ ಪ್ರತಿಕ್ರಿಯೆ, ‘‘ಅವರು ಕನ್ನಡಕ ಧರಿಸಿಲ್ಲ’’ ಎನ್ನುವುದಾಗಿತ್ತು.
ಹೋಮಾಯ್ ಅವರ ಕೊನೆಯ ಹುಟ್ಟಿದ ಹಬ್ಬದಂದು ಹೆಚ್ಚಿನ ಸಂಖ್ಯೆಯ ಜನರು ಆಕೆಯನ್ನು ಭೇಟಿಯಾದರು. ಪಾರ್ಸಿ ಧರ್ಮಶಾಲಾ ನಮಗೆ ಸ್ವಾದಿಷ್ಟ ಪಾರ್ಸಿ ಭೋಜನ ಕಳುಹಿಸಿಕೊಟ್ಟಿತ್ತು. ಸಂಜೆ ನಾವು ಹೊಸ ಟಿವಿ ಸೆಟ್ ಖರೀದಿಸಲು ಹೋದೆವು. ಬಳಿಕ ನಾವು ಕೇಕ್ ಕಟ್ ಮಾಡಿದೆವು. ಮರುದಿನ ನಾನು ಅವರ ಸಂದರ್ಶನವೊಂದನ್ನು ದಾಖಲಿಸಿದೆ. ಹುಟ್ಟಿದ ದಿನವನ್ನು ಆಚರಿಸುತ್ತಿರುವುದು ತಾನು ಇದೇ ಮೊದಲ ಬಾರಿ ಎಂದು ಅವರು ಹೇಳಿದರು.
ತನ್ನ ಭವಿಷ್ಯದ ಬಗ್ಗೆ ಮಾತನಾಡಿದ ಅವರು, ‘‘ನನ್ನ ದೇಹ ಘಾಸಿಯಾಗಿರಬಹುದು ಹಾಗೂ ನಿರುಪಯುಕ್ತವಾಗಿರಬಹುದು. ಆದರೆ, ನನ್ನ ಉತ್ಸಾಹ ನಾನು 40 ವರ್ಷದವಳಾಗಿದ್ದಾಗ ಇದ್ದಷ್ಟೇ ಇದೆ. ಅದು ಆಮೆಯಂತೆ ನನ್ನ ಈ ದೇಹದಲ್ಲಿ ವಾಸಿಸುತ್ತಿದೆ. ಹೋಗುವ ಸಮಯ ಬಂದಾಗ ಅದು ಈ ಹಂಗಾಮಿ ನಿವಾಸವನ್ನು ಬಿಟ್ಟು ಮಾತ್ರ ಹೋಗುತ್ತದೆ’’ ಎಂದು ಹೇಳಿದರು.
ಅವರ ಒಂದೇ ಒಂದು ವಿಷಾದವೆಂದರೆ, ಅವರು ಕಾಯಿಲೆಗಳಿಗೆ ತುತ್ತಾಗಲು ಆರಂಭಿಸಿರುವುದು. ತಾನು ಅದನ್ನು ದ್ವೇಷಿಸುತ್ತೇನೆ ಎಂದು ಅವರು ಹೇಳಿದರು. ಇದೇ ರೀತಿಯ ಜೀವನಕ್ಕೆ ಮತ್ತೆ ಬರುವುದಕ್ಕೆ ತನ್ನ ಬೇಸರವಿಲ್ಲ ಎಂದು ಇನ್ನೊಂದು ಸಂದರ್ಶನದಲ್ಲಿ ಅವರು ಹೇಳಿದ್ದರು. ‘‘ಯಾಕೆಂದರೆ, ನಾನು ಈ ಬದುಕನ್ನು ತುಂಬಾ ಪ್ರೀತಿಸುತ್ತೇನೆ’’. ಅವರು ಇನ್ನು ಕೆಲವೇ ತಿಂಗಳಲ್ಲಿ ತನ್ನ ಕೃತಿಗಳ ಪ್ರದರ್ಶನವನ್ನು ವೀಕ್ಷಿಸುವುದಕ್ಕಾಗಿ ನ್ಯೂಯಾರ್ಕ್‌ಗೆ ತೆರಳುವುದರಲ್ಲಿದ್ದರು.
‘‘ನೀವು ಬೇರೇನನ್ನು ಬಯಸುತ್ತೀರಿ?’’ ಎಂದು ನಾನು ಕೇಳಿದೆ. ಅವರ ಉತ್ತರ ಸರಳವಾಗಿತ್ತು: ‘‘ಉತ್ತಮ ಸ್ನೇಹಿತರು, ಶಾಂತಿ ಮತ್ತು ಸಮಾಧಾನ ಹಾಗೂ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳಲು ಒಂದು ಸ್ಥಳ’’.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...