ಅಂಕಣ

mail-img print-img

ಬ್ಯಾರಿ ಭಾಷೆಯ ಅಭಿವೃದ್ಧಿ ಹೇಗೆ?

ಬುಧವಾರ - ಜೂನ್ -30-2010

ಇತ್ತೀಚೆಗಷ್ಟೇ ತುಳುನಾಡಿನ ಜನರ ಗಮನ ಸೆಳೆದಿರುವ ‘ಬ್ಯಾರಿ ಭಾಷೆ’ಯ ಕುರಿತು ಜನರಲ್ಲಿ ಸ್ಪಷ್ಟವಾದ ನಿಲುವು ಇನ್ನೂ ಬೆಳೆದಿಲ್ಲ. ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡಮಿ ಹುಟ್ಟಿ ವರ್ಷವೊಂದು ದಾಟಿ ಹೋದರೂ, ಬಹುಪಾಲು ಬ್ಯಾರಿಗಳು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗೆಗೆ ವಿಶೇಷ ಅಭಿಮಾನ ತಳೆದಂತಿಲ್ಲ. ಕಾಸರಗೋಡಿನಿಂದ ಬೈಂದೂರಿನವರೆಗಿರುವ ಕರಾವಳಿಯ ಮುಸ್ಲಿಂ ಸಮುದಾಯ, ತಮ್ಮ ಹೆಸರಿನ ಮುಂದೆ ‘ಬ್ಯಾರಿ’ ಎಂದು ಕಡ್ಡಾಯವಾಗಿ ನಮೂದಿಸುವ ಕಾಲವೊಂದಿತ್ತು.

ಮಾಪ್ಲಾ ಜಾತಿಯವರೆಂದೂ, ಹೆಸರಿನ ಮುಂದೆ ಬ್ಯಾರಿ ಎಂದೂ ನಮೂದಿಸಿದ ದಾಖಲೆಗಳು ಪ್ರತಿಯೋರ್ವ ಬ್ಯಾರಿ ಮುಸ್ಲಿಮನ ಮನೆಯಲ್ಲೂ ಇಂದಿಗೂ ಕಾಣಬಹುದು. ಇಂದಿಗೂ ಹಳ್ಳಿಗಳಲ್ಲಿ ‘ಮಾಪ್ಲಾ’ ಜಾತಿಯೆಂದೇ ಹೇಳುತ್ತಿದ್ದು, ಬ್ಯಾರಿ ಎನ್ನಲು ಸಂಕೋಚ ಪಡುವವರಿದ್ದಾರೆ. 1970ರ ನಂತರ ಹುಟ್ಟಿ ಕೊಂಡ ಬ್ಯಾರಿ ಕಲ್ಯಾಣ ಸಂಸ್ಥೆಗಳು, ಬ್ಯಾರಿ ಸಾಹಿತ್ಯ ಪರಿಷತ್ತುಗಳು ಬ್ಯಾರಿ ಸಂಸ್ಕೃತಿ ಮತ್ತು ಭಾಷೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದು ಮಾತ್ರವಲ್ಲದೆ, ಬ್ಯಾರಿ ಅಕಾಡಮಿಯನ್ನು ಪಡೆ ಯುವಲ್ಲಿ ಯಶಸ್ವಿಯಾಗಿವೆ.ಆದರೆ, ಬ್ಯಾರಿಗಳಲ್ಲಿನ್ನೂ ಗೊಂದಲ ನಿವಾರಣೆಯಾಗಿಲ್ಲ. ಅದಕ್ಕೆ ಕಾರಣಗಳಿವೆ.

ಇತ್ತೀಚೆಗಿನವರೆಗೂ ‘ಮಾಪ್ಲಾ’ಗಳೆಂದೇ ಗುರುತಿಸಲ್ಪಡುತ್ತಿದ್ದ ಬ್ಯಾರಿಗಳಿಗೆ ಈ ಹೊಸ ಬದಲಾವಣೆ ಬಗ್ಗೆ ಸ್ಪಷ್ಟವಾದ ಅರಿವು ಬಂದಿಲ್ಲ. ಈಗ ಇರುವ, ಬೆಳೆಯುತ್ತಿರುವ ಬ್ಯಾರಿಭಾಷೆ ಒಂದು ಸೀಮಿತ ವ್ಯಾಪ್ತಿಯ ಜನರ ಭಾಷೆಯಾಗಿದೆ. ಈ ಭಾಷೆ ಪುತ್ತೂರು, ವಿಟ್ಲ, ಸುಳ್ಯ ತಾಲೂಕುಗಳಲ್ಲಿರುವ ಬ್ಯಾರಿಗಳ ಭಾಷೆಯಲ್ಲ. ಮಂಜೇಶ್ವರದಿಂದ ಕಾಸರಗೋಡಿನವರೆಗೆ ಬಹುಸಂಖ್ಯೆಯಲ್ಲಿ ಬ್ಯಾರಿಗಳಿದ್ದು, ಅವರಾಡುವ ಭಾಷೆಯೂ ಅಲ್ಲ.

ಹಾಗಿರುವಾಗ ಬ್ಯಾರಿಭಾಷೆಯ ಹೆಸರಿನಲ್ಲಿ ಸಮಸ್ತ ಬ್ಯಾರಿ ಸಮುದಾಯದ ಅಭಿವ್ಯಕ್ತಿಗೆ ಅವಕಾಶವಿಲ್ಲವೆಂಬ ಆರೋಪ ನಿಜವಾದುದೆ. ಬ್ಯಾರಿ ಭಾಷೆ ಅಭಿವೃದ್ಧಿಯಾಗ ಬೇಕಾದರೆ ಬ್ಯಾರಿ ಬಾಷೆಗೊಂದು ರೂಪ ಕೊಡಬೇಕು. ಸಮಸ್ತ ಬ್ಯಾರಿ ಸಮುದಾಯ ಅದನ್ನು ಒಪ್ಪುವಂತಿರಬೇಕು. ಇಲ್ಲದೆ ಹೋದರೆ ಬಹುಸಂಖ್ಯಾತ ಬ್ಯಾರಿಗಳ ಭಾಷೆ ಬೇರೆ, ಅಲ್ಪ ಸಂಖ್ಯಾತ ಬ್ಯಾರಿಗಳ ಭಾಷೆ ಬೇರೆ ಆಗಬಹುದು. ಇದರಿಂದ ಭಾಷೆಗೂ, ಜನಾಂಗೀಯ ಸಂಸ್ಕೃತಿಗೂ ಅಪಾಯವಿದೆ.

ಬ್ಯಾರಿ ಸಂಸ್ಕೃತಿ, ಭಾಷೆಯ ಕುರಿತು ಸಂಶೋಧನಾತ್ಮಕ ಅಧ್ಯಯನ ನಡೆದಿಲ್ಲ. ಡಾ. ಸುಶೀಲಾ ಉಪಾಧ್ಯಾಯರವರು ಮಾಪ್ಲಾ ಭಾಷೆಯ ಕುರಿತು ಸಂಶೋಧನೆ ಮಾಡಿದ್ದಾರೆ. ವಾಸ್ತವದಲ್ಲೂ ಅದು ಮಾಪ್ಲಾ ಭಾಷೆಯೇ. ಅವರು ಅಧ್ಯಯನ ನಡೆಸುತ್ತಿದ್ದ ಕಾಲದಲ್ಲಿ ಬ್ಯಾರಿಗಳು ಮಾಪ್ಲಾಗಳೆಂದೇ ಗುರುತಿಸಿಕೊಳ್ಳುತ್ತಿದ್ದರು. ಬ್ಯಾರಿಗಳಿಗೆ ಜನಾಂಗೀಯ ಸಾಂಸ್ಕೃತಿಕ ಪ್ರತ್ಯೇಕತೆಯಿದೆ ಎಂದು ಪ್ರತಿಪಾದಿಸಿ, ಸಂಶೋಧನೆಯನ್ನು ನಾನು ಮಾಡಿದ್ದೆ.

ಹಾಗಾಗಿ, ಅದೇ ಬ್ಯಾರಿ ಭಾಷೆ ಎಂದು ಗುರುತಿಸುವಂತಾಯಿತು. ಬ್ಯಾರಿ ಜಾನಪದ ಸಂಸ್ಕಾರಗಳೆಂದೂ, ಕಲೆಗಳೆಂದೂ ಪ್ರತಿಬಿಂಬಿಸುವ ದಫ್, ಒಪ್ಪನ, ಕೋಳ್ಕಳಿ, ಪಾಟ್ಟುಗಳು ಈಗಲೂ ಮಾಪ್ಲಾ ಗಳಲ್ಲೂ ರೂಢಿಯಲ್ಲಿದೆ ಎಂಬುದನ್ನು ಮರೆ ಯುವಂತಿಲ್ಲ. ಸಾಂಸ್ಕೃತಿಕವಾಗಿ ಬ್ಯಾರಿ ಸಂಸ್ಕೃತಿ, ಕಾಸರಗೋಡಿನವರೆಗೂ ವ್ಯಾಪಿಸಿರುವಾಗ, ಭಾಷೆಯ ಕುರಿತು ಸೀಮಿತಗೊಳಿಸುವುದು ಸರಿಯೆನಿಸುವುದಿಲ್ಲ.

ಹಾಗಾಗಿ ಬ್ಯಾರಿ ಭಾಷಾಭಿವೃದ್ಧಿಗಾಗಿ ವಿಶೇಷ ಶ್ರದ್ಧೆ ವಹಿಸು ವುದು, ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಪ್ರಪಂಚದಾದ್ಯಂತ ಹಬ್ಬಿಕೊಂಡಿರುವ ಹದಿನೈದು ಲಕ್ಷಕ್ಕೂ, ಮೀರಿರಬಹುದಾದ ಬ್ಯಾರಿಗಳನ್ನು ಒಂದೇ ಭಾಷೆಯಡಿ ಬರುವಂತೆ ಮಾಡಬೇಕು. ಬ್ಯಾರಿಗಳೆಂದು ಹೇಳಲು ಅಭಿಮಾನ ಪಡುವಂತಾಗಬೇಕು. ಈಗಾಗಲೇ ಪ್ರಾದೇಶಿಕವಾಗಿ, ಭಿನ್ನವಾಗಿರುವ ಬ್ಯಾರಿ ಭಾಷಾ ಗುಂಪುಗಳನ್ನು ಒಂದು ಗೂಡಿಸಲು ಸಾಧ್ಯವೇ ಎಂಬುದನ್ನು ಚರ್ಚಿಸುವುದೇ ಈ ಲೇಖನದ ಉದ್ದೇಶ.

ಬ್ಯಾರಿ ಭಾಷೆ ದ್ರಾವಿಡಭಾಷಾ ವರ್ಗಕ್ಕೆ ಸೇರಿದ ಒಂದು ಭಾಷೆ. ದ್ರಾವಿಡ ಭಾಷೆ ಎಂದರೆ ತಮಿಳು ಮೂಲಾಧಾರಿತವಾಗಿ ಬೆಳೆದು ಬಂದ ಭಾಷೆಗಳು. ತುಳು ಕೂಡಾ ದ್ರಾವಿಡ ಭಾಷೆಯೇ. ಮಲಯಾಳಂ ಕೂಡಾ ದ್ರಾವಿಡ ಭಾಷೆಯೇ. ಮಲಯಾಳವು ತಮಿಳಿನ ಉಪ ಭಾಷೆಯಾಗಿ ಪ್ರತ್ಯೇಕಿಸಲ್ಪಟ್ಟು ಬೆಳೆದು ಬಂದ ಭಾಷೆ. ಕೇವಲ 500ವರ್ಷಗಳಲ್ಲಿ ಅಂದರೆ ಕ್ರಿ.ಶ.1400ರ ನಂತರ, ಈ ಭಾಷೆ ಅದ್ಬುತವಾದ ಅಭಿವೃದ್ಧಿ ಸಾಧಿಸಿದೆ.

ಭಾರತದ 22 ಶೆಡೂಲ್ಡ್ ಭಾಷೆಗಳಲ್ಲಿ ಅದೂ ಒಂದಾಗಿದೆ. ಕೇರಳ ಮಾತ್ರವಲ್ಲ. ಮಾಹೆ, ಲಕ್ಷದ್ವೀಪಗಳಲ್ಲೂ ಅದೇ ಭಾಷೆ. ಕರಾವಳಿ ಜಿಲ್ಲೆಗಳಿಗೂ ವ್ಯಾಪಿಸಿದೆ. ಜಗತ್ತಿನಾದ್ಯಂತ 40 ಮಿಲಿಯದಷ್ಟು ಜನರು ಈ ಭಾಷೆಯನ್ನಾಡುತ್ತಾರೆ. ಇದು ಹೇಗೆ ಸಾಧ್ಯ ವಾಯಿತು? ಮಲೆಯಾಳದ ಉಪಭಾಷೆಯಂ ತಿರುವ ಬ್ಯಾರಿ ಭಾಷೆಗೆ ಇದು ಯಾಕೆ ಸಾಧ್ಯ ಇಲ್ಲ?

ಕ್ರಿ.ಶ. 6ನೆ ಶತಮಾನದವರೆಗೆ ‘ತಮಿಳಕಂ’ ಎಂದೇ ಕರೆಯಲ್ಪಟ್ಟು ತುಳುನಾಡಿನವರೆಗೂ ವ್ಯಾಪಿಸಿದ್ದ ದ್ರಾವಿಡ ಭಾಷೆ ತಮಿಳು. ಸಂಗಂ ಸಾಹಿತ್ಯಗಳಾದ ‘ಶಿಲೆಪ್ಪಡಿಕಾರಂ’ನಂತಹ ಕೃತಿಗಳು ವ್ಯಾಪಕ ಪ್ರಭಾವ ಬೀರಿದೆ. ಚೇರ, ಪಾಂಡ್ಯ ಅರಸರುಗಳ ಪ್ರೋತ್ಸಾಹ ಸಾಹಿತ್ಯಕ್ಕಿತ್ತು. ಭೂತಾಳ ಪಾಂಡ್ಯ ಮತ್ತು ಅಳಿಯಕಟ್ಟು, ವ್ಯವಸ್ಥೆ ತುಳುನಾಡಿನವರೆಗೂ ಹಬ್ಬಿರುವುದು ಇದರ ಸಂಕೇತವೆನ್ನಲಾಗಿದೆ.

ತಮಿಳು ಭಾಷೆಯ ವೈಶಿ ಷ್ಟವೆಂದರೆ ಸಂಸ್ಕೃತಪದ ಬಳಕೆ ಇಲ್ಲದಿರುವುದು. ‘ಚೆಂತಮಿಳು, ಕರಿಂತಮಿಳು,’ ಎಂದೇ ಭಾಷೆ ಯನ್ನು ಅಭಿಮಾನಿಸುತ್ತಿದ್ದರು. ಕದಂಬರಸರ ಕಾಲದಿಂದಾರಂಭಿಸಿ ಹಲವಾರು ಶತಮಾನಗಳವರೆಗೆ, ತುಳುನಾಡು, ಕೇರಳ ಮತ್ತು ತಮಿಳು ನಾಡಿನವರೆಗೂ ಹೋಗಿ ನೆಲೆ ನಿಂತ ಆರ್ಯ ಬ್ರಾಹ್ಮಣ ಕುಟುಂಬಗಳು,ತಮಿಳಿನಲ್ಲಿ ಸಂಸ್ಕೃತ ಬೆರೆಸಿ ‘ಆರ್ಯ ಭಾಷೆ’ ಎಂದು ಕರೆದು ಹೊಸ ರೂಪ ಕೊಟ್ಟವು.

ಮೂಲತಃ ತುಳು ಲಿಪಿಯಂತಿರುವ ಬ್ರಾಹ್ಮಿಲಿಪಿಯನ್ನೂ ಬಳಸಿ, ಬಟ್ಟೆಳುತ್ತು (ಬಟ್ಟೆ ಬರಹ) ಎಂದು ಕರೆದರು. ಹೀಗೆ ಆರಂಭವಾದ ಸಂಸ್ಕೃತ ಪದಗಳ ಆಯಾ ಮದಿಂದ ಕ್ರಿ.ಶ.10ನೆ ಶತಮಾನದಲ್ಲಿ ಮಲ ಯಾಳವೆಂಬ ಹೊಸ ಭಾಷೆಯ ಆವಿಷ್ಕಾರ ವಾಯಿತು. ಮಲಯಾಳಕ್ಕೆ ಜನ್ಮ ನೀಡಿದ ಈ ಮೂಲ ಬ್ರಾಹ್ಮಣರು ಇದನ್ನು ‘ಗ್ರಂಥ ಭಾಷೆ’ ಎಂದು ಕರೆದರು. ತುಳು ಬ್ರಾಹ್ಮಣರು, ಮತ್ತು ಕೇರಳ ಬ್ರಾಹ್ಮಣರ ಸಂಪರ್ಕದಿಂದ ಭಾಷೆಯೂ ಸಂಸ್ಕೃತಿಯೂ ಬೆಳೆಯಿತು.

ಮಾತೃಮೂಲ ಕುಟುಂಬ ವ್ಯವಸ್ಥೆ ಕೂಡಾ ಬೆಳೆಯಿತು. ಭಾಷಾ ಸುಧಾರಣೆ ನಿಧಾನವಾಗಿದ್ದರೂ 15ನೆ ಶತಮಾನದಲ್ಲಿ ಪೋರ್ಚುಗೀಸರ ಬೆಂಬಲ, ಹಿಂದಿನ ರಾಜಾಶ್ರಯದ ಪ್ರೋತ್ಸಾಹ ಭಾಷಾ ಬೆಳವಣಿಗೆಗೂ ಕಾರಣವಾಯಿತು. ಹೆನ್ರಿಕ್ (Henrique) ಎಂಬವರು ‘ಡಾಕ್ಟ್ರಿನ ಕ್ರಿಸ್ತಂ’ ಎಂಬ ಕೃತಿಯನ್ನು ಮಲಬಾರ್ ತಮಿಳಿನಲ್ಲಿ ಬರೆದು, 1556ರಲ್ಲಿ ಕೊಚ್ಚಿಯಲ್ಲಿ ಪ್ರಕಟ ಗೊಂಡಿತು. ಇದೇ ಮೊತ್ತ ಮೊದಲ ಮಲಯಾಳ ಮುದ್ರಿತ ಪುಸ್ತಕ. ಮಲಯಾಳದ ಪಿತಾಮಹ ಕುಂಜತ್ತು ರಾಮನುಜಂ ಎಳುತ್ತಚ್ಚನ್, ಕಾವ್ಯ ಸಾಹಿತ್ಯಗಳನ್ನು ನೀಡಿದರು. ಬಟ್ಟೆಳುತ್ತನ್ನೇ ಬಳಸಿದ್ದರು.

17ನೆ ಶತಮಾನದ ಮಹಾ ಸಾಧನೆ ಇದು. ಲಿಪಿ ಸುಧಾರಣೆ ಗೊಂಡಿತು. ಭಾಷೆ ಸುಧಾರಣೆ ಗೊಂಡಿತು. ಬೆಂಜಮಿನ್ ಬೈಲ್ಸ್ ಅಕ್ಷರ ಜೋಡಣೆ ಆರಂಭಿಸಿದ. ಕೋಟಯಂನ ಚರ್ಚ್ ಮಿಶನ್ ಸೊಸೈಟಿ (C.M.S) ಪುಸ್ತಕ ಮುದ್ರಣ ಆರಂಭಿಸಿದರು. 1847ರಲ್ಲಿ ಜರ್ಮನಿಯಿಂದ ಬಂದ ಗುಂಡರ್ಟ್ ಎಂಬುವರು ಪತ್ರಿಕೆ ಆರಂಭಿಸಿದರು. ‘ರಾಜ್ಯ ಸಮಾಚಾರಂ’ ಪ್ರಥಮ ಪತ್ರಿಕೆ ತಲಚೇರಿಯಿಂದ ಪ್ರಕಟವಾಯಿತು.

ಬಾಸೆಲ್ ಮಿಶನ್ ವತಿಯಿಂದ ಇದು ಪ್ರಕಟವಾಗುತ್ತಿತ್ತು. ಮಲಯಾಳದ ವಿಕಸನ ನೋಡಿದರೆ, ಅದೊಂದು ಅದ್ಭುತ ಸಾಧನೆ ಎನಿಸುತ್ತದೆ. ವಿದ್ವಾಂಸ ಕಾರ್ಡ್‌ವೆಲ್ ಹೇಳಿದಂತೆ, Malayalam branched from classical Tamil and gained a large amount of Sanskrit VocubularyT.K., ಅಂದರೆ ತಮಿಳಿನ ಉಪಭಾಷೆ ಮತ್ತು ಸಂಸ್ಕೃತದ ಮಿಶ್ರಣ. ಇದನ್ನು ಬೆಳೆಸುವಲ್ಲಿ ನಂಬೂದರಿ ಅರಸರ ಪ್ರೋತ್ಸಾಹ, ಪೋರ್ಚುಗೀಸರ ಭಾಷಾಸಕ್ತಿ, ಅರಬರ ಕೊಡುಗೆಯೂ ಇದೆ.

ಕ್ರೈಸ್ತ ಮತ್ತು ಜೈನರ ಕೊಡುಗೆಯೂ ಇದೆ. ಕೃಷ್ಣಮೆನನ್ A Primer of Malayalam Literature  ಪುಸ್ತಕದಲ್ಲಿ ಆಧುನಿಕ ಮಲಯಾಳ ಬೆಳೆದದ್ದೇ 15ನೆ ಶತಮಾನದಿಂದ ಎಂದಿದ್ದಾರೆ. ತಮಿಳರ ಕರಿಂತಮಿಳು, ಸಂಗಂ ಸಾಹಿತ್ಯದ ಆರಂಭಿಕ ತಮಿಳು ಪರಿವರ್ತನೆ ಮತ್ತು ಆಳ್ವಾರ ಸಂತರ ಪ್ರಭಾವ, ಮಲಯಾಳ ಹುಟ್ಟುವಂತೆ ಮಾಡಿತು. ಆರಂಭದ ನಾಡಿನ ಪಾಟ್ಟುಗಳು ಮಲಯಾಳದ ಮಲಬಾರಿನ ಮಾಪ್ಲಾ ಪಾಟ್ಟುಗಳಿಗಾಗಿ ವೃದ್ಧಿ ಯಾಯಿತು.

ಮಣಿಪ್ರವಾಳಂದಿಂದ ಎಳುತ್ತಚ್ಚನ ವರೆಗೆ ಹೊಸ ವಿಕಸನ ನಿಧಾನವಾಗಿತ್ತು. ‘ಆಧ್ಯಾತ್ಮಿಕ ರಾಮಾಯಣ’ದೊಡನೆ ಸಾಹಿತ್ಯ ಲೋಕಕ್ಕೆ ಪ್ರವೇಶಿಸಿದ ಮಲಯಾಳ ಭಾಷೆ ನಾನೂರು ವರ್ಷಗಳಲ್ಲಿ ಇತರ ಭಾಷೆಗಳನ್ನು ಮೀರಿ ಮುನ್ನಡೆಯಿತು. ತಮಿಳಿಗೆ ಸಂಸ್ಕೃತ ಪದಗಳ ತುಂಬುವಿಕೆ ಹೊಸತೊಂದು ಭಾಷೆ ಯನ್ನು ಸೃಷ್ಟಿಸಿತು.

ಮಲೆಯಾಳದ ಉಪಭಾಷೆಯಾದ ಬ್ಯಾರಿ ಭಾಷೆಗೂ ಇಂತಹದೊಂದು ಸಾಧನೆ ಮಾಡಲು ಸಾಧ್ಯವಿಲ್ಲವೆ? ಖಂಡಿತ ಸಾಧ್ಯ. ಭಾಷಾಭಿಮಾನಿಗಳು ಹೊಸದಿಕ್ಕಿನೆಡೆಗೆ ಹೆಜ್ಜೆಯಿಡಬೇಕು. ಭಾಷೆಯ ಹಿಂದಿರುವ ಸತ್ಯಾಂಶಗಳನ್ನು ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ಬ್ಯಾರಿ ಭಾಷೆ ದ್ರಾವಿಡ ಭಾಷಾ ಗುಂಪಿಗೆ ಸೇರಿದ ಒಂದು ಭಾಷೆ. ಮಲಯಾಳದ ಒಂದು ಉಪಭಾಷೆ. ‘ಮಾಪ್ಲಾ ಭಾಷೆ’ ಎಂದೂ ಕರೆಯಲಾಗುತ್ತಿತ್ತು. ಶೇಕಡಾ 70ರಷ್ಟು ಮಲಯಾಳ ಪದಗಳೇ ಇವೆ. ಬ್ಯಾರಿ ಭಾಷೆ ಮಲಯಾಳಿಗೆ ಅರ್ಥವಾಗುತ್ತದೆ.

ಮಲಯಾಳ ಬ್ಯಾರಿಗಳಿಗೂ ಅರ್ಥವಾಗುತ್ತದೆ. ಕೆಲವೇ ಪದಗಳನ್ನು ಬಿಟ್ಟರೆ ಉಳಿದೆಲ್ಲವೂ ಸಮಾನಾವಕಾಶ ಪದಗಳೇ. ಎದ್ದು ಕಾಣುವ ವ್ಯತ್ಯಾಸವೆಂದರೆ ತುಳು ವ್ಯಾಕರಣ ಮತ್ತು ಧ್ವನಿ ಮಾದರಿಗಳು. ತುಳುಭಾಷಾ ಪದಗಳೂ ಧಾರಾಳ ಬಳಕೆಯಾಗಿವೆ. ಪ್ರಾದೇಶಿಕವಾಗಿ ಇವುಗಳ ಮಟ್ಟ ಭಿನ್ನವಾಗಿದೆ. ಮಲಯಾಳದಲ್ಲಿ ಧಾರಾಳ ಸಂಸ್ಕೃತ ಪದಗಳು ಬಳಕೆಯಾಗುತ್ತವೆ. ಬ್ಯಾರಿ ಬಾಷೆಯಲ್ಲಿ ಕಡಿಮೆ. ಅರಬೀ ಪದಗಳ ಬಳಕೆ ಹೆಚ್ಚಿವೆ. ಪರ್ಷಿಯನ್ ಪದಗಳೂ ಇವೆ.

ಮಲೆಯಾಳ, ತುಳು, ಅರಬಿ, ಮತ್ತಿತರ ಅನ್ಯಭಾಷಾ ಪದಗಳ ಹೊರತಾಗಿ ಸ್ವತಂತ್ರ ಬ್ಯಾರಿ ಪದಗಳು ಶೇಕಡಾ 5ರಷ್ಟೂ ಇಲ್ಲ. ಉದಾ: ದೇಯಿ, ಪೆಞ್ಯಿ, ಚಿಮ್ಮೆ, ಚೆಮ್ಮೆ, ಮಾದ, ಪಾತೆ, ಕಡಾಯ, ನಾಯರ್, ಇತ್ಯಾದಿ, ಇತ್ಯಾದಿ. ಬ್ಯಾರಿ ಭಾಷೆಗೆ ಲಿಪಿ ಇಲ್ಲ. ಮಲಯಾಳ, ತುಳುಭಾಷೆಗಳ, ಮೂಲ ಬರಹ ‘ಬಟ್ಟೆಳುತ್ತು’ ಅಥವಾ ಬಟ್ಟೆ ಬರಹ, ಸರಳೀಕರಣಗೊಳಿಸಿ ಬ್ಯಾರಿಗಳಲ್ಲೂ ಕೂಡಾ ಬಳಸಲಾಗುತ್ತಿತ್ತು. ಇಂತಹ ದಾಖಲೆಗಳಿವೆ. ಅಗತ್ಯ ಕಂಡಾಗ ಲಿಪಿ ಬೆಳೆಸುವ ಅವಕಾಶಗಳಿವೆ.

ಮಾಪ್ಲಾ ಭಾಷೆಯೆಂದೇ ಕರೆದಿರುವ ಹಿಂದಿನ ಬ್ಯಾರಿ ಭಾಷೆಯಲ್ಲಿ ಅರಬೀ ಮಲಯಾಳ(ಅರಬಿಲಿಪಿ) ಬಳಸಲಾಗುತ್ತಿತ್ತು. ‘ಮಾಪ್ಲಾಪ್ಪಾಟ್ಟು’ಗಳೆಂದೇ ಪ್ರಸಿದ್ಧವಾದ ಹಾಡುಗಳು ಈ ಬರಹದಲ್ಲೇ. ವೌಲೂದುಗಳು, ಮಾಲೆಪ್ಪಾಟ್ಟುಗಳು, ಒಪ್ಪನಪಾಟ್ಟುಗಳು, ಮೊಲಾಂಜಿ ಪಾಟ್ಟುಗಳು, ದಫ್‌ಪಾಟ್ಟುಗಳು, ರಾತೀಬುಗಳು, ಧಾರ್ಮಿಕ ಬರಹಗಳು ಈ ಬರಹದಲ್ಲಿದ್ದವು.

ಈಗಲೂ ಇವೆ. ಇವುಗಳಲ್ಲಿ ಮಿಶ್ರಭಾಷೆ ಬಳಸಲಾಗುತ್ತಿತ್ತು. ಬ್ಯಾರಿ ಪರಂಪರೆಯನ್ನು ಅಭ್ಯಸಿಸಿದಾಗ ಇವೆಲ್ಲವೂ ಸ್ಪಷ್ಟವಾಗುವುದು. ಇವುಗಳನ್ನು ಕಲಿಸುವ, ವ್ಯವಸ್ಥೆಗೊಳಿಸುವ ಸಂಘ ಸಂಸ್ಥೆಗಳೂ ಕೂಡಾ ಮಂಗಳೂರಿನಲ್ಲೂ ಇದ್ದವು. ಇವೆಲ್ಲವುಗಳೂ ಬ್ಯಾರಿ ಸಂಸ್ಕೃತಿಯ ಹಿನ್ನೆಲೆಯಲ್ಲಿವೆ.

ಮಲಯಾಳವು ಹತ್ತನೆ ಶತಮಾನದಲ್ಲಿ ಆರಂಭಗೊಂಡು 15ನೆ ಶತಮಾನದ ನಂತರವೇ ಸಾಹಿತ್ಯ ಭಾಷೆಯಾಗಿ ಬೆಳೆಯಿತೆಂದ ಮೇಲೆ, ಅದೇ ಮಲಯಾಳ ಪದ ಬಳಕೆ ಮಾಡುವ ಬ್ಯಾರಿ ಭಾಷೆ ಅದಕ್ಕಿಂತಲೂ ಪ್ರಾಚೀನ ಎನ್ನುವುದು ಸರಿಯಲ್ಲ. ಬ್ಯಾರಿ ಸಂಸ್ಕೃತಿಯ ಕುರಿತಾಗಿ ತೋರಿಸುವ ಶಾಸನಗಳಾಗಲೀ, ಬರಹಗಳಾಗಲೀ, ದಾಖಲೆಗಳಾಗಲೀ ಹತ್ತನೆ ಶತಮಾನಕ್ಕಿಂತ ಹಿಂದಿನ ವಿಚಾರ ತಿಳಿಸುತ್ತಿಲ್ಲ.

ಯತೇಚ್ಛ ಬ್ಯಾರಿ ಸಂಸ್ಕೃತಿ ವಿಚಾರ ತಿಳಿಸುವ ತುಳುಪಾಡ್ದನಗಳು ಕೂಡಾ 14ನೆ ಶತಮಾನಕ್ಕಿಂತ ಹಿಂದಿನದಲ್ಲ. ಹಾಗಿರುವಾಗ, ಬ್ಯಾರಿ ಭಾಷೆ ಮಲಯಾಳಕ್ಕಿಂತಲೂ ಪ್ರಾಚೀನ ಎಂದಾಗಲೀ, ಪ್ರಾಚೀನ ವೈಶಿಷ್ಟಗಳಿದೆಯೆಂದಾಗಲೀ ತೋರಿಸಿ ಕೊಡುವ ದಾಖಲೆಗಳಿಲ್ಲ.ಇವೆಲ್ಲವನ್ನು ತುಲನಾತ್ಮಕವಾಗಿ ಪರಿಶೀಲಿಸಿ ಒಪ್ಪಿಕೊಳ್ಳ ಬೇಕು. ಮಲಯಾಳದ ಉಪಭಾಷೆಯಾಗಿ ಹುಟ್ಟಿದ ಬ್ಯಾರಿ ಭಾಷೆಯನ್ನು ಸ್ವತಂತ್ರ ಭಾಷೆಯಾಗಿ ಅಭಿವೃದ್ಧಿ ಪಡಿಸಬೇಕು. ಆ ನಿಟ್ಟಿನಲ್ಲಿ ಹಲವು ಹೆಜ್ಜೆಗಳ ಅಗತ್ಯ ಇದೆ.

1. ಬ್ಯಾರಿ ಭಾಷೆಯಲ್ಲಿ ಈಗ ಇರುವ ಪ್ರಭೇದಗಳನ್ನು ನೀಗಿಸಿ ಒಂದೇ ಭಾಷೆಯಾಗಿ ಬೆಳೆಸುವ ಪ್ರಯತ್ನ ಮಾಡಬೇಕು. ಒಂದು ಭಾಷೆಗೆ ಒಂದು ರೂಪ, ಭಾಷಾ ವಿಧಿ ವಿಧಾನಗಳು ಮತ್ತು ಪದಕೋಶ ಇದ್ದರೆ, ಆ ಭಾಷೆಯ ಬೆಳವಣಿಗೆ ಸಾಧ್ಯ. ಒಂದೊಂದು ಪ್ರದೇಶದಲ್ಲಿ ಒಂದೊಂದು ಭಾಷೆ ಇರಿಸಿ, ತಮ್ಮದೇ ಬ್ಯಾರಿ ಬಾಷೆ ಎಂದಿಟ್ಟುಕೊಂಡರೆ ಭಾಷೆ ಬೆಳೆಯುವ ಅವಕಾಶ ಕಡಿಮೆ. ಪ್ರಪ್ರಥಮ ಹೆಜ್ಜೆಯೇ ಭಾಷೆಗೊಂದು ರೂಪ ನೀಡುವುದು ಮತ್ತು ಪದಕೋಶ ನಿರ್ಮಾಣ.

2. ಇದೀಗ ಬಳಕೆಯಲ್ಲಿರುವ ಬ್ಯಾರಿ ಭಾಷೆಯಲ್ಲಿ ಹಲವಾರು ಬದಲಾವಣೆಗಳು ಅಗತ್ಯ. ಆ ಬದಲಾವಣೆಗಳೇ ಭಾಷೆಗೆ ನೀಡುವ ನವೀನ ಲಕ್ಷಣಗಳು:
ಅ) ಬ್ಯಾರಿ ಭಾಷೆಯಲ್ಲಿ ‘ಸ’ ಮಾತ್ರ ಬಳಕೆಯಲ್ಲಿವೆ. ಶ,ಷ, ಬಳಕೆಯಲ್ಲಿಲ್ಲ. ಇದೇ ಮುಂದುವರಿಯಬೇಕು.
ಆ)ಮಹಾ ಪ್ರಾಣಾಕ್ಷರಗಳು, (ಫ, ಭ, ಇತ್ಯಾದಿ) ಬಳಕೆಯಲ್ಲಿಲ್ಲ. ತೀರಾ ಕಡಿಮೆ. ಮಹಾ ಪ್ರಾಣಾಕ್ಷರಗಳನ್ನು ಕೈ ಬಿಡಬೇಕು. ಸರಳಗೊಳಿಸಬೇಕು.
ಇ) ಕ್ರಿಯಾ ಪದಾಂತ್ಯಗಳಲ್ಲಿ ‘ಣ’ ಬಳಕೆ ಇಲ್ಲ. ‘ನ’ ಮಾತ್ರ ಇದೆ. ಕಾಣನು, ಬೆಕ್ಕನು ಇತ್ಯಾದಿ. ಇದನ್ನು ಮುಂದುವರಿಸಬೇಕು.

3. ಮಲಯಾಳದಲ್ಲಿ ಹೊಸತನ ಬಂದಿರುವುದೇ ಸಂಸ್ಕೃತ ಪದಗಳಿಂದ. ಬ್ಯಾರಿಗಳಲ್ಲಿ ಮುಸ್ಲಿಮರಲ್ಲದವರಿಲ್ಲ. ಅರಬೀ ಪದಬಳಕೆ ಸುಲಭ. ಒಂದು ವಿಶೇಷ ಲಕ್ಷಣವಾಗಿ ಧಾರಾಳ ಅರಬೀ ಪದಗಳ ಬಳಕೆಯಾಗಬೇಕು. ಉದಾ: ರಬ್, ರಹ್ಮಾನ್, ಆಖರತ, ವಕ್ತ್, ಖಳಾ, ಫರಳ್, ಸುನ್ನತ್, ಬರಕತ್, ಹಿಕ್‌ಮತ್, ಜಹನ್ನಂ, ಜನ್ನತ್, ಮುಸೀಬತ್, ಬಲಾಖತ್, ವಫಾತ್, ಕರತಾಸ್, ಹಾಜತ್, ಅಹಲ್,ಹಾಲ್, ಇನ್ಸ್, ಜಿನ್, ತಬ್ದೀಲ್, ಮಅನಾ, ನಜೀಸ್, ಇತ್ಯಾದಿ. ಶೇಕಡಾ 40ರಷ್ಟು ಅರಬೀ ಪದಗಳು ಬ್ಯಾರಿ ರೂಪದಲ್ಲಿ ಬಳಕೆಯಾದಲ್ಲಿ ಭಾಷೆಗೆ ಹೊಸತನ ಬರುವುದು.

4. ಬಳಕೆಯಲ್ಲಿರುವ ಭಾಷೆಯ ಉಚ್ಚಾರ, ವ್ಯಾಕರಣವನ್ನು ಮುಂದುವರಿಸಬೇಕು. ವ್ಯಾಕರಣ ಮಲಯಾಳದಿಂದ ಭಿನ್ನವಾಗಿದೆ. ತುಳು ವ್ಯಾಕರಣದಂತಿದೆ. ಅದನ್ನೇ ಮುಂದುವರಿಸಬೇಕು. ಆದರೆ, ಈಗ ಇರುವ ಇಬ್ಬಗೆಯ ಕ್ರಿಯಾಪದ ಬಳಕೆಯನ್ನು ತೆಗೆದು, ಏಕರೂಪದ ಬಳಕೆ ಮಾಡಬೇಕು. ಉದಾ: ಬಂಡೆ, ಬಂಡೊ, ಪೊಂಡೆ, ಪೊಂಡೊ, ಎಡ್‌ಕ್‌ಡೆ, ಎಡ್‌ಕ್‌ರೆ, ಎಡ್‌ಕ್‌ಡೊ ಇತ್ಯಾದಿ ಈ ವ್ಯತ್ಯಾಸ ಇರಬಾರದು.

5. ಸ್ವತಂತ್ರ ಬ್ಯಾರಿ ಪದಗಳು ಜಾಸ್ತಿಯಾಗಬೇಕು. ಕನಿಷ್ಠ ಶೇಕಡಾ 25ರಷ್ಟಾದರೂ ಇರಬೇಕು. ಹೊಸ ಪದ ಬಳಕೆ ಪದಕೋಶ ನಿರ್ಮಾಪಕರು, ಸಾಹಿತಿಗಳು, ಲೇಖಕರು ಮಾಡಬೇಕು. ಯಾವನೇ ಬ್ಯಾರಿ ಭಾಷಾಭಿಮಾನಿ ಹೊಸಪದ ಬಳಕೆಯ ಸೂಚನೆ ನೀಡಬಹುದು. ತುಳು ಭಾಷೆಯಲ್ಲಿ ಸೊಲ್ಮೆಲು, ನಮನ ಇತ್ಯಾದಿ ಇಂತಹ ಆಯಾಮಗಳೇ. ಬ್ಯಾರಿ ಭಾಷೆಗೂ ಹೊಸ ಆಯಾಮ ಆಗಬೇಕು.

6. ತುಳು ಭಾಷಾ ಪದಗಳನ್ನು ಸೀಮಿತಗೊಳಿಸಬೇಕು. ಸ್ಥಳೀಯ ಭಾಷೆ ತುಳು, ಮತ್ತು ಕನ್ನಡವಾಗಿರುವುದರಿಂದ ಸಹಜವಾಗಿಯೇ ಆ ಭಾಷಾ ಪದಗಳು ಸೇರಿಕೊಳ್ಳುತ್ತವೆ. ಶೇಕಡಾ 15ಕ್ಕೆ ಸೀಮಿತಗೊಳಿಸಬೇಕು.

7. ಉಳಿದ ಶೇಕಡಾ 20ರಷ್ಟಕ್ಕೆ ಮಲಯಾಳ ಮತ್ತು ಮಿಶ್ರ ಭಾಷಾ ಪದಗಳನ್ನು ಸೀಮಿತಗೊಳಿಸಬೇಕು.

ಬ್ಯಾರಿ ಭಾಷಾಭಿವೃದ್ಧಿಗಾಗಿ ಈ ನೆಲೆಯಲ್ಲಿ ಪ್ರಯತ್ನಿಸಬೇಕೆಂದು ಈ ಮೂಲಕ ಸಲಹೆ ನೀಡುತ್ತೇನೆ. ಬ್ಯಾರಿ ಭಾಷೆಯನ್ನು ಸ್ವತಂತ್ರ ಭಾಷೆಯಾಗಿ ಸುಂದರ ಭಾಷೆಯಾಗಿ, ಬ್ಯಾರಿ ಸಮುದಾಯದ ಏಕರೂಪ ಭಾಷೆಯಾಗಿ ಅಭಿವೃದ್ಧಿಪಡಿಸಲು ಇಂತಹ ಪ್ರಯತ್ನಬೇಕು.

ಈ ವಿಶೇಷತೆಗಳನ್ನು ಆಧಾರವಾಗಿರಿಸಿಕೊಂಡು, ಬ್ಯಾರಿ ಪದಕೋಶ ಸಂಗ್ರಹವನ್ನು ಆರಂಭಿಸಿದ್ದೇನೆ. ಬ್ಯಾರಿ ಬರಹಗಾರರು ಸಾಹಿತಿಗಳು ಈ ದಿಸೆಯಲ್ಲಿ ಹೆಜ್ಜೆಯಿರಿಸಿದರೆ, ಬ್ಯಾರಿ ಭಾಷೆಯು ಮಲಯಾಳಕ್ಕಿಂತಲೂ ಪ್ರಭಾವಶಾಲಿಯಾಗಿ ಬೆಳೆಯಬಹುದು. ಓದುಗರ ಅಭಿಮತವನ್ನು ನನಗೆ ಬಿ.ಎಂ.ಇಚ್ಲಂಗೋಡು, ನಂದಿಗುಡ್ಡ, ಜಪ್ಪು ಬಪ್ಪಾಲ್, ಮಂಗಳೂರು-02 ಇಲ್ಲಿಗೆ ತಿಳಿಸಬಹುದು.

Careers Talk
basheer
28th June 2010, 3:22 p.m.

ವೆರಿ ಗುಡ್ ವಾರ್ತಾಭಾರತಿ ಕೀಪ್ ಇಟ್ ಅಪ್. ವೀ ಅರ್ happy........


hasanmukha
30th June 2010, 2:49 p.m.

ಇಚ್ಲಂಗೋಡುರವರ ಸಲಹೆಗಳಿಗೆ ನಮ್ಮ ಬ್ಯಾರಿ ಸಾಹಿತ್ಯ ಅಕಾಡೆಮಿ ಎಷ್ಟು ಸ್ಪಂದಿಸಬಹುದು ಮತ್ತು ನಮ್ಮ ಬ್ಯಾರಿ ನಾಯಕರು ಭಿನ್ನತೆಯನ್ನು ಮರೆತು ಕಾರ್ಯ ರೂಪಕ್ಕೆ ಇಳಿಯುವರೇ, ಕಾಲವೇ ಉತ್ತರಿಸಬೇಕು.


ashfak
1st July 2010, 1:25 a.m.

ಒಳ್ಳೆಯ ಚಿಂತನೆ........


zainuddeen
1st July 2010, 2:44 a.m.

ichlangodu avara aakankshe eederali..............


Pallakudel Hameed
1st July 2010, 8:59 a.m.

ಡಿಯರ್ ಸರ್, ದಿಸ್ ವಿಲ್ ಹ್ಯಾಪನ್ ವೆರಿ ಸೂನ್. ಕೀಪ್ ಇಟ್ ಅಪ್. ನಿಮ್ಮ ಆತ್ಮೀಯ ಪಲ್ಲಕುದೆಲ್ ಹಮೀದ್ saudi ಅರೇಬಿಯಾ.


Abdul Rahiman
4th July 2010, 12:06 p.m.

ಪ್ರೊ.ಇಚ್ಲಂಗೋಡು ಅವರ ಬ್ಯಾರಿ ಭಾಷೆಯ ಮೂಲದ ಅನ್ವೇಷಣೆ ಮತ್ತು ಭಾಷಾ ಅಭಿವ್ರದ್ಧಿಯ ಬಗ್ಗೆ ಇರುವ ಕಾಳಜಿ ಅಪೇಕ್ಷನೀಯವಾದುದು. ಬ್ಯಾರಿ ಭಾಷೆಯ ಅಭಿವ್ರದ್ಧಿಯ ಬಗ್ಗೆ ಇನ್ನಷ್ಟು ಲೇಖನಗಳು ಹೊರಬರಲಿ ಎಂದು ಆಶಿಸುತ್ತೇನೆ.


Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ