ದೇಶದ 100 ಜಿಲ್ಲೆಗಳಲ್ಲಿ ನಾಂದಿ ಪ್ರತಿಷ್ಠಾನ ನಡೆಸಿದ ಹಸಿವು ಮತ್ತು ಅಪೌಷ್ಟಿಕತೆ ಕುರಿತ ಸಮೀಕ್ಷಾ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಧಾನಮಂತ್ರಿಗಳು, ಅಪೌಷ್ಟಿಕತೆ ರಾಷ್ಟ್ರೀಯ ಅವಮಾನ ಎಂದು ಕರೆದು, ಅಪೌಷ್ಟಿಕತೆಯ ನಿರ್ಮೂಲನೆಗಾಗಿ ಸಂಘಟಿತ ಪ್ರಯತ್ನ ನಡೆಯಬೇಕು ಎಂದು ಹೇಳಿರುವುದು ಈ ಸಮಸ್ಯೆಯ ಗಂಭೀರತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಸಮೀಕ್ಷೆಯ ಪ್ರಕಾರ ದೇಶದ ‘42’ಮಕ್ಕಳು ಅಪೌಷ್ಟಿಕತೆಗೆ ತುತ್ತಾಗಿದ್ದಾರೆ. ವಿಶ್ವದ 3 ಅಪೌಷ್ಟಿಕ ಮಕ್ಕಳಲ್ಲಿ ಒಂದು ಅಪೌಷ್ಟಿಕ ಮಗು ಭಾರತದ್ದಾಗಿದೆ ಎನ್ನುವುದು ಖಚಿತವಾಗಿಯೂ ರಾಷ್ಟ್ರದ ಅಭಿವೃದ್ಧಿಯ ಕುಸಿತದ ಸಂಕೇತ. ಅಪೌಷ್ಟಿಕತೆಯಿಂದ ನರಳುತ್ತಿರುವ ಬಹುಸಂಖ್ಯಾತ ಮಕ್ಕಳು ದಲಿತ, ಆದಿವಾಸಿ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿರುವುದು, ಹಸಿವು-ಅಪೌಷ್ಟಿಕತೆ, ಜಾತಿ ಹಾಗೂ ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ನಡುವೆ ಪರಸ್ಪರ ಸಂಬಂಧವಿರುವುದರ ಪ್ರತೀಕವಾ ಗಿದೆ. ಸ್ವಾತಂತ್ರ ಲಭಿಸಿ 64 ವರ್ಷಗಳು ಕಳೆದರೂ ಈ ದೇಶದ ತಳ ಸಮುದಾಯಗಳ ಹಸಿವು-ಅಪೌಷ್ಟಿಕತೆಯಂತಹ ಮೂಲಭೂತ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಸಂಪೂರ್ಣ ವಾಗಿ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಆದು ದರಿಂದ ಅಪೌಷ್ಟಿಕತೆ ಸಾಮಾಜಿಕ ನ್ಯಾಯದ ಸಮಸ್ಯೆಯೂ ಹೌದು.
ಅಪೌಷ್ಟಿಕತೆ ರಾಷ್ಟ್ರೀಯ ಅವಮಾನ ಎಂದು ಕೇಂದ್ರ ಸರಕಾರವೇನೋ ಒಪ್ಪಿಕೊಂಡಂತಾಗಿದೆ. ಆದರೆ ರಾಜ್ಯ ಸರಕಾರ ಇಂದಿಗೂ ರಾಜ್ಯದಲ್ಲಿ ಸಂಭವಿಸುತ್ತಿರುವ ಶಿಶುಮರಣ ಮತ್ತು ಅಪೌಷ್ಟಿಕ ಮಕ್ಕಳ ಸಮಸ್ಯೆಯನ್ನು ಒಂದು ಗಂಭೀರ ಸಂಗತಿ ಯನ್ನಾಗಿ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಚಿನ್ನದ ನಾಡು-ಭತ್ತದ ಕಣಜ ಎಂದೇ ಪ್ರಸಿದ್ಧಿ ಯಾಗಿರುವ ರಾಯಚೂರು ಜಿಲ್ಲೆಯೊಂದ ರಲ್ಲೇ 2009ರಲ್ಲಿ 811 ಮಕ್ಕಳು, 2010ರಲ್ಲಿ 1233 ಮಕ್ಕಳು ಮತ್ತು 2011ರ ಜನವರಿ ಯಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ 6 ವರ್ಷದೊಳಗಿನ ಮಕ್ಕಳು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ-ಅಂಶಗಳು ದೃಢಪಡಿಸಿವೆ. ರಾಜ್ಯದಲ್ಲಿ 6 ವರ್ಷದೊಳ ಗಿನ 21,00818 ಸಹಜ, 1129947 ಸಾಧಾರಣ ಮತ್ತು 71,605 ಅತಿ ಕಡಿಮೆ ತೂಕಹೊಂದಿರುವ ತೀವ್ರ ಅಪೌಷ್ಟಿಕ ಮಕ್ಕಳಿ ದ್ದಾರೆಂದು, ಈ ಇಲಾಖೆಯ 2011ರ ಅಂಕಿ ಅಂಶಗಳು ಹೇಳುತ್ತವೆ.
ಕಳೆದ ಸಾಲಿನ ಅಕ್ಟೋಬರ್ ಮತ್ತು ಸಪ್ಟೆಂಬರ್ ತಿಂಗಳ ಅವಧಿಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂ ಕೊಂದರಲ್ಲೇ ಮಹಾಲಕ್ಷ್ಮಿ, ಆಂಜನೆಯ ಮತ್ತು ನಾಗರಾಜ್ ಎನ್ನುವ ಮೂರು ತೀವ್ರ ಅಪೌಷ್ಟಿಕ ಮಕ್ಕಳು ಮೃತಪಟ್ಟ ಪ್ರಕರಣಗಳ ಬಗ್ಗೆ ಸರಕಾರದ ಗಮನವನ್ನು ಸೆಳೆಯಲು ಸಾಮಾಜಿಕ ಪರಿವರ್ತನಾ ಜನಾಂದೋಲನವು ತೀವ್ರ ಹೋರಾಟಕ್ಕೆ ವಿಸ್ತೃತ ಬೆಂಬಲ ನೀಡಿದವು. ತದನಂತರ, ಅಪೌಷ್ಟಿಕತೆ ರಾಜ್ಯವ್ಯಾಪಿ ಸಮಸ್ಯೆಯಾಗಿರುವುದು ಅನಾವರಣಗೊಂಡು, ಶಿಶುಮರಣ ಮತ್ತು ಅಪೌಷ್ಟಿಕತೆಯನ್ನು ಹೋಗ ಲಾಡಿಸುವ ಸರಕಾರಿ ಯೋಜನೆಗಳ ವೈಫಲ್ಯ, ಅಧಿಕಾರಿ ಶಾಹಿಯ ಬೇಜವಾಬ್ದಾರಿ , ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಢಾಳಾಗಿ ಎದ್ದು ಕಂಡು ಬಂತು.
ರಾಯಚೂರು ಜಿಲ್ಲೆಯ ಅಪೌಷ್ಟಿಕ ಮಕ್ಕಳ ಹೃದಯ ವಿದ್ರಾವಕ ಬದುಕಿನ ತುಣುಕುಗಳನ್ನು ಪ್ರಸಾರ ಮಾಡಿದ ಕನ್ನಡ ದೃಶ್ಯ ಮಾಧ್ಯಮವೊಂದರ ಕಾರ್ಯಕ್ರಮದಿಂದ ಕಂಗೆಟ್ಟ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವಿಮೋಚನಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ.ಎಲ್. ಸಾಚೀಲ್‌ರವರು, ಮಕ್ಕಳ ಅಮೂಲ್ಯ ಜೀವದ ಸಂರಕ್ಷಣೆಗಾಗಿ ನ್ಯಾಯಾಂಗದ ಮಧ್ಯ ಸ್ಥಿಕೆಯನ್ನು ಕೋರಿ, ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದರು. ಅವರ ಪತ್ರವನ್ನು ಸಾರ್ವಜನಿಕ ಮೊಕದ್ದಮೆಯನ್ನಾಗಿ ಉಚ್ಛ ನ್ಯಾಯಾಲಯ ಪರಿಗಣಿಸಿತು. ಆಹಾರದ ಹಕ್ಕಿನ ಪ್ರಕರಣಗಳಿಗೆ ಸಂಬಂಧಿಸಿದ ಸರ್ವೋಚ್ಛ ನ್ಯಾಯಾಲಯದ ಆಯುಕ್ತರ ರಾಜ್ಯ ಸಲಹೆಗಾರರಾಗಿರುವ ನ್ಯಾಯವಾದಿ ಕ್ಲಿಪ್ಟನ್ ರೋಜಾರಿಯೋರವರು ಈ ಮೊಕದ್ದಮೆಯಲ್ಲಿ appear ಆಗಿ ನೊಂದ ಮಕ್ಕಳ ಪರ ಕಾನೂನಿನ ಹೋರಾಟಕ್ಕಿಳಿದರು.
ರಾಯಚೂರು ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಸಾವಿಗೀಡಾದ ಮಕ್ಕಳ ದುರಂತ ಅಂತ್ಯಕ್ಕೆ ಬಾಲ್ಯ ವಿವಾಹ ಪದ್ಧತಿ, ರಕ್ತಸಂಬಂಧಗಳಲ್ಲಿನ ಮದುವೆ, ಪೋಷಕರ ಮೂಢನಂಬಿಕೆ ಮತ್ತಿತರ ಅಂಶಗಳೇ ಕಾರಣ ಎಂದು ತನ್ನ ಮೊಂಡುವಾದ ಪ್ರದರ್ಶಿಸಿದ ಸರಕಾರದ ಹೃದಯಹೀನವಾದವನ್ನು ತಿರಸ್ಕರಿಸಿದ ರಾಜ್ಯ ಉಚ್ಛ ನ್ಯಾಯಾಲಯ, ಶಿಶುಮರಣ ಮತ್ತು ಅಪೌಷ್ಟಿಕತೆಯನ್ನು ನಿರ್ಮೂಲನೆಗೊಳಿಸಲು ಸಮಿತಿ ರಚಿಸಿ ಸಮಗ್ರವಾದ ವರದಿ ಸಲ್ಲಿಸಲು ಅಕ್ಟೋಬರ್ 21ರಂದು ಸರಕಾರಕ್ಕೆ ಆದೇಶಿಸಿತು.
ಶಿಶುಮರಣ ಮತ್ತು ಅಪೌಷ್ಟಿಕತೆಯನ್ನು ತಡೆಗಟ್ಟಲು ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳ ಪುನರ್‌ಪರಿಶೀಲನೆ, ಅವುಗಳ ಅನುಷ್ಠಾನ ದಲ್ಲಿನ ಲೋಪದೋಷ ಹಾಗೂ ಅನುದಾನದ ಬಳಕೆಯ ಕುರಿತು ಸಮರ್ಪಕ ವರದಿ ರೂಪಿಸುವುದು ಈ ಸಮಿತಿಯ ಪ್ರಮುಖ ಧ್ಯೇಯೋದ್ದೇಶವಾಗಿತ್ತು.ಈ ಸಮಿತಿಯಲ್ಲಿ ಜನಪರ ಸಂಘಟನೆಗಳ ಪ್ರತಿನಿಧಿಗಳಿಗೂ ಪ್ರಾತಿನಿಧ್ಯ ದೊರೆಯಬೇಕೆಂದು ಎಷ್ಟೇ ಒತ್ತಾಯಿಸಿದರೂ ಮಣಿಯದ ಸರಕಾರ, ಅಂತಿಮವಾಗಿ ಸಾಮಾಜಿಕ ಪರಿವರ್ತನಾ ಜನಾಂದೋಲನ, ಜನಾರೋಗ್ಯ ಆಂದೋಲನ ಮತ್ತು ಆಹಾರದ ಹಕ್ಕಿಗಾಗಿ ಆಂದೋಲನದ ಪ್ರತಿನಿಧಿಗಳನ್ನು ಮಾತ್ರ ಆಹ್ವಾನಿತ ಸದಸ್ಯರನ್ನಾಗಿ ಸೇರ್ಪಡೆ ಮಾಡಿಕೊಂಡಿತು.
ಅಕ್ಟೋಬರ್ 31ರಂದು ನಡೆದ ಸಮಿತಿಯ ಮೊದಲ ಸಭೆಯಲ್ಲಿ ಭಾಗ ವಹಿಸಿದ್ದ ಸಂಘ ಸಂಸ್ಥೆಗಳ ಅಭಿಪ್ರಾಯದ ಮೇರೆಗೆ ಸಮಸ್ಯೆಯನ್ನು ವಿಭಿನ್ನ ನೆಲೆಗಳಲ್ಲಿ ಪರಿಶೀಲಿಸಿ, ಅದಕ್ಕೆ ಪೂರಕವಾದ ಶಿಫಾರಸುಗಳನ್ನು ಮಾಡಲು ಮೂರು ಉಪ ಸಮಿತಿಗಳನ್ನು ರಚಿಸಲಾಯಿತು. 1. ಆರೋಗ್ಯ ಮತ್ತು ಅಪೌಷ್ಠಿ ಕತೆ, 2. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ವಿಕಲಚೇತನ, ಎಚ್‌ಐವಿ ಪೀಡಿತ ಹಾಗೂ ಇನ್ನಿತರ ತಳಸಮುದಾಯಗಳ ಮಕ್ಕಳ ಸಮಸ್ಯೆಗಳಿಗೆ ಸಂಬಂಧಿಸಿದ ಸಮಿತಿ ಮತ್ತು 3. ಸಮನ್ವಯತೆ ಹಾಗೂ ಮೇಲ್ವಿಚಾರಣೆ ಸಮಿತಿ -ಇವೆ ಆ ಮೂರು ಉಪಸಮಿತಿಗಳು.
ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ರಾದ ನೀನಾ ನಾಯಕ್, ಆಹಾರದ ಹಕ್ಕಿನ ಪ್ರಕರಣಗಳಿಗೆ ಸಂಬಂಧಿಸಿದ ಸರ್ವೋಚ್ಛ ನ್ಯಾಯಾಲಯದ ಆಯುಕ್ತರ ಸಲಹೆಗಾರ ರಾದ ನ್ಯಾಯವಾದಿ ಕ್ಲಿಪ್ಟನ್ ರೋಜಾರಿಯೋ, food and Nutrition world® ಸಂಪಾದಕರು ಹಾಗೂ ಪ್ರಿಸ್ಟಿನ್ ಲ್ಯಾಬ್‌ನ ಮುಖ್ಯಸ್ಥರಾದ ಡಾ. ಕೆ. ಸಿ. ರಘು ಮುಂತಾದ ವಿವಿಧ ಕ್ಷೇತ್ರಗಳ ಪರಿಣಿತರನ್ನು, ಪೌಷ್ಟಿಕ ಆಹಾರ ತಜ್ಞರನ್ನು, ಮಕ್ಕಳ ಹಾಗೂ ಮಾನವ ಹಕ್ಕುಗಳ ಹೋರಾಟಗಾರರನ್ನು ಒಳಗೊಂಡ ಈ ಮೂರು ಉಪಸಮಿತಿಗಳು ಸಿದ್ಧಪಡಿಸಿರುವ ವರದಿಯ ಶಿಫಾರಸುಗಳನ್ನು ಸಮಗ್ರವಾಗಿ ಅಂಗೀಕರಿಸಲು ಸರಕಾರ ಹಿಂದೇಟು ಹಾಕುತ್ತಿದೆ. ಅದರಲ್ಲೂ ಬಹು ಮುಖ್ಯವಾಗಿ, ತಮಿಳುನಾಡು ಮೂಲದ ಕ್ರಿಸ್ಟಿಫ್ರೈಡ್ ಗ್ರಾಂ ಇಂಡಸ್ಟ್ರಿ ಜೊತೆ ಮಾಡಿ ಕೊಂಡಿರುವ ಅಂಗನವಾಡಿ ಕೇಂದ್ರಗಳಿಗೆ ವಿತ ರಿಸುವ ಪೂರಕ ಪೌಷ್ಟಿಕ ಆಹಾರದ ಗುತ್ತಿಗೆ ಯನ್ನು ಕೂಡಲೇ ರದ್ದುಗೊಳಿಸುವಂತೆ ಸಮಿತಿ ಮಾಡಿರುವ ಶಿಫಾರಸನ್ನು ವರದಿಯಿಂದ ಕೈ ಬಿಡುವಂತೆ ಒತ್ತಾಯಿಸಲಾಗುತ್ತಿದೆ.
ಜನವರಿ 11ರಂದು ನಡೆದ ಸಮಿತಿಯ ಕೊನೆಯ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ನಡೆದುಕೊಂಡ ರೀತಿ ಆಘಾತಕಾರಿಯಾಗಿತ್ತು. ಸಮಿತಿಯ ಸದಸ್ಯರು ಶಿಫಾರಸು ಮಾಡುವ ಪೂರಕ ಪೌಷ್ಟಿಕ ಆಹಾರ ಪದ್ಧತಿಗೆ ಬೇಕಾದ ಸಂಪನ್ಮೂಲವನ್ನು ಎಲ್ಲಿಂದ ತರುವುದು? ನೀವು ಹೇಳಿದಂತೆ ನಾವು ಕೇಳಲಿಕ್ಕಾಗು ವುದಿಲ್ಲ, ರಾಜ್ಯದಲ್ಲಿ ಅಪೌಷ್ಟಿಕ ಮಕ್ಕಳ ಸಮಸ್ಯೆ ನೀವು ಹೇಳುವಷ್ಟು ಗಂಭೀರ ವಾಗಿಲ್ಲ ಎಂದು ಸಮಿತಿಯ ಸದಸ್ಯರ ಮೇಲೆ ಹರಿಹಾಯ್ದರು. ಈಗಾಗಲೇ ನಾವು ಅಂಗನವಾಡಿ ಕೇಂದ್ರಗಳಲ್ಲಿ ಪರ್ಯಾಯ ಆಹಾರ ಪದ್ಧತಿಯನ್ನು ಜಾರಿಗೊಳಿಸಲು ನಿರ್ಧರಿಸಿದ್ದೇವೆ ಎಂದು ತಮ್ಮ ನಿರ್ಧಾರಗಳನ್ನು ಸಮರ್ಥಿಸಿ ಕೊಂಡರು.
ಆದರೆ ಸಮಿತಿಯ ಷರತ್ತು ಮತ್ತು ನಿಬಂಧನೆಗಳನ್ವಯ, ಹೊಸ ಯೋಜನೆ ಪ್ರಾರಂಭಿಸಬೇಕಾದಲ್ಲಿ ಅವುಗಳ ವಿವರಣೆ ನೀಡಬೇಕೆಂಬ ನಿಯಮವಿದ್ದರೂ ಸಹ ಸರಕಾರ ಸಮಿತಿಯ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ ಏಕಪಕ್ಷೀಯವಾಗಿ ತೆಗೆದು ಕೊಂಡಿರುವ ನಿಲುವು, ಶಿಶು ಮರಣ, ಅಪೌಷ್ಟಿಕತೆಯನ್ನು ಹೋಗಲಾಡಿಸುವುದಕ್ಕಿಂತಲೂ ಮತ್ತಿನ್ಯಾವುದೋ ಲಾಭಕ್ಕೋಸ್ಕರ ತೆಗೆದುಕೊಂಡಿ ರುವ ನಿರ್ಧಾರವಾಗಿ ಗೋಚರಿಸುತ್ತಿದೆ! ಸರಕಾರ ಪ್ರತಿಪಾದಿಸುತ್ತಿರುವ ಪರ್ಯಾಯ ಆಹಾರ ಪದ್ಧತಿಯ ಅನುಷ್ಠಾನದಲ್ಲಿ ‘ಕ್ರಿಸ್ಟಿಫ್ರೈಡ್ ಗ್ರಾಂ’ ನಂತಹ ಖಾಸಗಿ ಕಂಪೆನಿಗಳು ಪಾಲುದಾರರಾಗಿ ರುತ್ತವೋ ಅಥವಾ ಇಲ್ಲವೋ ಎನ್ನುವುದರ ಕುರಿತು ಯಾವುದೇ ಸ್ಪಷ್ಟತೆ ಕಂಡು ಬರುತ್ತಿಲ್ಲ.
ರಾಜ್ಯದ 6 ವರ್ಷದೊಳಗಿನ ಅಂಗನವಾಡಿ ಕೇಂದ್ರಗಳಿಗೆ ಹೋಗುತ್ತಿರುವ ಮತ್ತು ಹೋಗದಿರುವ ಎಲ್ಲ ಮಕ್ಕಳ ತೂಕ ಮಾಡಿ, ಅಪೌಷ್ಟಿಕ ಮಕ್ಕಳ ಪುನರ್ ಸಮೀಕ್ಷೆ ನಡೆಸುವಂತೆ, ಸಮಿತಿ ಸದಸ್ಯರು ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಿಗೆ, ನವೆಂಬರ್ 31ರಂದು ನಡೆದ ಸಮಿತಿಯ ಮೊದಲ ಸಭೆಯಲ್ಲೇ ಸೂಚಿಸಿದ್ದರು. ಈ ಕುರಿತು ಯಾವುದೇ ಪ್ರಯತ್ನ ನಡೆಸದ ಈ ಎರಡು ಇಲಾಖೆಗಳು (ರಾಯಚೂರು ಜಿಲ್ಲೆಯನ್ನು ಹೊರತುಪಡಿಸಿ), ಈ ಪುನರ್ ಸಮೀಕ್ಷೆಗಾಗಿ 6 ತಿಂಗಳ ಕಾಲಾವಕಾಶ ಕೋರಿದ್ದು, ಸಮಿತಿಯ ಸದಸ್ಯರನ್ನು ದಂಗು ಬಡಿಸಿತು! ಕೊನೆಗೆ ಸದಸ್ಯರ ಒತ್ತಾಯದ ಮೇರೆಗೆ ಬರುವ 45 ದಿನಗಳಲ್ಲಿ 5 ವರ್ಷದೊಳಗಿನ ಮಕ್ಕಳ ಮರು ಸಮೀಕ್ಷೆ ಮಾಡುವುದಾಗಿ ಭರವಸೆ ನೀಡಲಾಗಿದೆ.
ಜನವರಿ 11ರ ಸಭೆಯಲ್ಲಿ ಸಮಿತಿಯ ಸದಸ್ಯರಿಗೆ ಬಹಳ ಸ್ಪಷ್ಟವಾಗಿ ಕಂಡು ಬಂದ ಅಂಶವೇನೆಂದರೆ; ರಾಜ್ಯ ಸರಕಾರಕ್ಕೆ ಶಿಶುಮರಣ ಮತ್ತು ಮಕ್ಕಳ ಅಪೌಷ್ಟಿಕತೆಯನ್ನು ನಿರ್ಮೂಲನೆಗೊಳಿಸುವ ಇಚ್ಛಾಶಕ್ತಿಯಿಲ್ಲ ಎಂಬುದು. ಸರಕಾರವೇ ಗುರುತಿಸಿರುವ ರಾಜ್ಯದ 75,605 ತೀವ್ರ ಅಪೌಷ್ಟಿಕ ಮಕ್ಕಳಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಮತ್ತು ಪೂರಕ ಪೌಷ್ಟಿಕ ಆಹಾರವನ್ನು ಒದಗಿಸುವಂತೆ ಸಮಿತಿಯ ಸದಸ್ಯರು ಆರಂಭದಿಂದ ಆಗ್ರಹ ಪಡಿಸುತ್ತಿದ್ದರೂ ಸರಕಾರ ಉಾಫೆ ಧೋರಣೆಯನ್ನೇ ಮುಂದುವರಿಸಿಕೊಂಡು ಬರುತ್ತಿದೆ.
ಗಾಯದ ಮೇಲೆ ಬರೆ ಎಳೆದಂತೆ ಮಕ್ಕಳ ಹಾಜರಾತಿ ಕಡಿಮೆ ಇರುವ ಅಂಗನವಾಡಿ ಕೇಂದ್ರಗಳನ್ನು ವಿಲೀನಗೊಳಿಸುವ ಕ್ರಮಕ್ಕೆ ಮುಂದಾಗಿರುವುದು;ಸರಕಾರ ಪೂರೈಕೆ ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣಕ್ಕಾಗಿ ಅಂಗನವಾಡಿ ಕೇಂದ್ರಗಳನ್ನೇ ನೆಚ್ಚಿಕೊಂಡಿರುವ ದಲಿತ, ಆದಿವಾಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳ ಹಕ್ಕುಗಳನ್ನೇ ಕಬಳಿಸಲು ಹೊರಟಿದೆ. ಈ ಸಮುದಾಯಗಳ ಗರ್ಭಿಣಿ ಸ್ತ್ರೀಯರ, ಬಾಣಂತಿಯರ ಮತ್ತು ಕಿಶೋರಿಯರ ಆರೋಗ್ಯ ತಪಾಸಣೆ, ವೈದ್ಯಕೀಯ ನೆರವಿನಂತಹ ಮೂಲಭೂತ ಸೇವೆಗಳನ್ನು ನಿರಾಕರಿಸಲು ನಿಂತಿದೆ. ಅಂಗನವಾಡಿ ಕೇಂದ್ರಗಳನ್ನು ಮುಚ್ಚುವುದರ ಮೂಲಕ ಖಾಸಗಿ Play Homeಗಳನ್ನು Crecherಗಳನ್ನು ಮತ್ತು ಕಾನ್ವೆಂಟ್‌ಗಳನ್ನು ಬೆಳೆಸಲು ಪಣ ತೊಟ್ಟಂತಿದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಖಾಸಗೀಕರಣವನ್ನು ಚುರುಕುಗೊಳಿಸುವ ಕೆಲಸಕ್ಕೆ ಕೈ ಹಾಕಿದಂತಿದೆ.
ಅಪೌಷ್ಟಿಕತೆ ರಾಷ್ಟ್ರೀಯ ಅವಮಾನ ಎಂದು ಪ್ರಧಾನ ಮಂತ್ರಿಗಳು ನುಡಿದಿರುವುದಕ್ಕೆ ಪ್ರತಿಯಾಗಿ, ಅವರಿಗೆ ಪತ್ರ ಬರೆಯುವುದಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಅಪೌಷ್ಟಿಕತೆಯ ವಿಚಾರದಲ್ಲೂ ಕೀಳು ರಾಜಕೀಯ ಮಾಡದೆ, ದಕ್ಷಿಣ ಭಾರತದಲ್ಲೇ ಅಪೌಷ್ಟಿಕತೆ ಅತ್ಯಧಿಕವಾಗಿರುವ ಕರ್ನಾಟಕದಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವ ರಾಜ್ಯ ಸರಕಾರ ಎಷ್ಟರ ಮಟ್ಟಿಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ ಎನ್ನುವುದು ಈ ಇಬ್ಬರು ಮಹನೀಯರು ರಾಜ್ಯದ ಜನತೆಗೆ ಮನವರಿಕೆ ಮಾಡಿಕೊಡಬೇಕು. ಮಾತಿಗಿಂತ ಕೃತಿ ಲೇಸು ಎಂಬುದನ್ನು ಸಾಬೀತು ಪಡಿಸಬೇಕು!
ಅಪೌಷ್ಟಿಕತೆ ನಿರ್ಮೂಲನೆಗೊಳಿಸಲು ಪ್ರಧಾನಿಗಳಿಗೆ ಉಪದೇಶ ಮಾಡಲು ಹೊರಟಿರುವ ಇದೇ ಸಚಿವರು, ರಾಜ್ಯ ಉಚ್ಚ ನ್ಯಾಯಾಲಯ ಬಿಸಿ ಮುಟ್ಟಿಸುವವರೆಗೆ ಅಪೌಷ್ಟಿಕತೆಯಿಂದ ಮಕ್ಕಳು ಮೃತಪಟ್ಟ ರಾಯಚೂರು ಜಿಲ್ಲೆಗೆ ಕಾಲಿಟ್ಟಿರಲಿಲ್ಲ. ತದನಂತರ ಇಂದಿನವರೆಗೂ -ಆ ಮಕ್ಕಳ ಸಾವು ಅಪೌಷ್ಟಿಕತೆಯಿಂದ ಆಗಿಲ್ಲ ಎಂದು ನಿರೂಪಿಸುವುದರಲ್ಲೇ ಮಗ್ನರಾಗಿದ್ದಾರೆ. ತೀವ್ರ ಅಪೌಷ್ಟಿಕತೆಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಮುಗ್ಧ ಕಂದಮ್ಮಗಳನ್ನು ಉಳಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವ ವ್ಯವಧಾನವೂ ಅವರಿಗಿಲ್ಲ. ರಾಜ್ಯ ಮಹಿಳಾ ಆಯೋಗದ ಕಥೆಯೂ ಇದಕ್ಕೆ ಭಿನ್ನವಾಗಿಲ್ಲ. ಈ ಆಯೋಗದ ಅಧ್ಯಕ್ಷರು ಸೌಜನ್ಯಕ್ಕಾದರೂ ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ, ಪೋಷಕರಿಗೆ ಸಾಂತ್ವಾನದ ಮಾತುಗಳನ್ನಾಡಿಲ್ಲ.
ಅಪೌಷ್ಟಿಕತೆಯಿಂದ ಮೃತಪಟ್ಟ ಮನೆಗಳಿಗೆ ಭೇಟಿಯೂ ನೀಡಿಲ್ಲ. ಅಪೌಷ್ಟಿಕತೆಯಿಂದ ಸಾಯುತ್ತಿರುವ ಮಕ್ಕಳ ದಾಖಲಾತಿಯಲ್ಲಿ, ಸಾವಿನ ಕಾರಣವನ್ನು ಮರೆಮಾಚುವ ವ್ಯವಸ್ಥಿತ ಷಡ್ಯಂತ್ರವನ್ನು ರಾಜ್ಯ ಸರಕಾರ ನಡೆಸುತ್ತಿದೆ. ಮಕ್ಕಳ ಸಾವಿಗೆ ಪೋಷಕರನ್ನು ಹೊಣೆಗಾರರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಶಿಶುಮರಣ ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ತನ್ನ ಜವಾಬ್ದಾರಿಯ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳದ ಹೊರತು ಹೊಸತರ ಬದಲಾವಣೆಯನ್ನು ತರಲು ಸರಕಾರದಿಂದ ಸಾಧ್ಯವಿಲ್ಲ. ತಾಯಿಯ ಮೊಲೆ ಹಾಲೇ ವಿಷವಾದರೆ ಹೇಗೆ ಮಗು ಬದುಕುವುದಿಲ್ಲವೋ ಹಾಗೆಯೇ ಸರಕಾರವೆಂಬ ತಾಯಿಯ ಮೊಲೆ ಹಾಲು ವಿಷವಾದರೆ ನಾಡಿನ ಮಕ್ಕಳು ಉಳಿಯಲಾರವು.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...