ಬೆಂಗಳೂರು, ಮಾ. 19: ತೀವ್ರ ಗದ್ದಲ ಮತ್ತು ವಿರೋಧದ ನಡುವೆಯೂ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆಯನ್ನು ನಿಷೇಧಿಸುವ ಕಾಯ್ದೆಗೆ ರಾಜ್ಯ ಸರಕಾರ ವಿಧಾನಸಭೆಯಲ್ಲಿ ಶುಕ್ರವಾರ ಧ್ವನಿಮತದ ಅಂಗೀಕಾರ ಪಡೆದುಕೊಂಡಿದೆ.
ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್‌ನ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ನಡೆಸುತ್ತಿದ್ದಾಗ್ಯೂ ಲೆಕ್ಕಿಸದೆ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2010’ನ್ನು ಧ್ವನಿಮತಕ್ಕೆ ಹಾಕಿದರು. ಇದನ್ನು ವಿರೋಧಿಸಿ ಧರಣಿ ನಿರತರು ವಿಧೇಯಕದ ಪ್ರತಿಯನ್ನು ಹರಿದು ವಿಧಾನಸಭೆಯಲ್ಲಿ ತೂರಾಡಿದರು. ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ನಡುವೆ ಮಾತಿನ ಚಕಮಕಿ ವ್ಯಾಪಕವಾಗಿತ್ತು. ಆದಾಗ್ಯೂ ವಿಧೇಯಕ ಅಂಗೀಕಾರಗೊಂಡು ಕಾಯ್ದೆಯಾಗಿದೆ ಎಂದು ಸಭಾಧ್ಯಕ್ಷರು ಘೋಷಣೆ ಮಾಡಿದರು. ಪ್ರತಿಪಕ್ಷಗಳ ಶಾಸಕರು, ‘ಬಹುಸಂಖ್ಯಾತರ ಆಹಾರ ಪದ್ಧತಿಯನ್ನು ಕಸಿದುಕೊಳ್ಳಲು ಮುಂದಾಗಿರುವ ಕೋಮುವಾದಿ ಸರಕಾರಕ್ಕೆ ಧಿಕ್ಕಾರ. ರೈತ ವಿರೋಧಿ ಮತ್ತು ಜನ ವಿರೋಧಿ ಸರಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸದನದ ನಡಾವಳಿಗಳು ಸಂವಿಧಾನ ಬದ್ಧವಾಗಿ ನಡೆಯುತ್ತಿಲ್ಲ. ಸದಸ್ಯರ ಅಭಿಪ್ರಾಯವನ್ನು ಪರಿಗಣಿಸದೆ ಸಂವಿಧಾನ ಬಾಹಿರವಾಗಿ ಮಸೂದೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳ ಸದಸ್ಯರು ದೂರಿದರು.
‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2010’ವನ್ನು ಪಶುಸಂಗೋಪನಾ ಸಚಿವ ರೇವು ನಾಯಕ್ ಬೆಳಮಗಿ ಭೋಜನ ವಿರಾಮದ ನಂತರ ಸದನಕ್ಕೆ ಪರಿಚಯಿಸಿದರು. ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಿದರು.
‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕದ ಕುರಿತು ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ಮುಖಂಡ ಸಿದ್ಧರಾಮಯ್ಯ, ರಾಜ್ಯ ಸರಕಾರ ಅಸಂವಿಧಾನಿಕವಾಗಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಹುಸಂಖ್ಯಾತರ ಆಹಾರ ಪದ್ಧತಿಯ ಮೇಲೆ ದಾಳಿ ಮಾಡಲು ಸರಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋವಿನ ಗಂಜಳ, ಸೆಗಣಿಯ ಗಂಧ-ಗಾಳಿ ಅರಿಯದ ಜನರು ಈ ಕಾಯ್ದೆ ಜಾರಿಗೆ ತರಲು ಹುನ್ನಾರ ನಡೆಸಿದ್ದಾರೆ. ಒಂದು ಸಮುದಾಯದ ಮೇಲೆ ದ್ವೇಷ ಸಾಧಿಸುವ ಉದ್ದೇಶದಿಂದ ಮಸೂದೆಯನ್ನು ತರಾತುರಿಯಲ್ಲಿ ತರಲಾಗುತ್ತಿದೆ. ಇದರಿಂದ ಚರ್ಮೋದ್ಯಮದ ಮೇಲೆ ಆಧಾರವಾಗಿರುವ ಜನರು ನಿರುದ್ಯೋಗಿಗಳಾಗುತ್ತಾರೆ. ಮಸೂದೆಯಲ್ಲಿ ಅವರಿಗೆ ಯಾವುದೇ ಪರ್ಯಾಯಗಳನ್ನು ಸೂಚಿಸಿಲ್ಲ ಎಂದು ಸಿದ್ಧರಾಮಯ್ಯ ಆಕ್ಷೇಪಿಸಿದರು. ದೇಶದ ಯಾವುದೇ ರಾಜ್ಯದಲ್ಲಿಯೂ ಇಲ್ಲದ ಮಸೂದೆಯನ್ನು ಬಿಜೆಪಿ ಸರಕಾರ ಜಾರಿಗೆ ತರಲುವ ಮೂಲಕ ಹಿಟ್ಲರ್ ರಾಜ್ಯ ಸ್ಥಾಪಿಸುವ ಹುನ್ನಾರ ನಡೆಸಿದೆ. ಇದರಿಂದ ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ವಾಗುತ್ತದೆ. ರಾಜ್ಯದಲ್ಲಿನ ಸೌಹಾರ್ದಕ್ಕೆ ಧಕ್ಕೆಯುಂಟಾಗುತ್ತದೆ. ಈಗಾಗಲೇ ಆತಂಕದಲ್ಲಿ ಬದುಕು ನಡೆಸುತ್ತಿರುವ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಸರಕಾರ ಮಸೂದೆ ಜಾರಿಗೆ ತರುತ್ತಿದೆ. ಇದರ ವಿರುದ್ಧ ಜನರು ಸಿಡಿದೇಳುತ್ತಾರೆ. ಸರಕಾರ ಮಸೂದೆಯನ್ನು ಹಿಂಪಡೆಯಬೇಕು ಎಂದು ಅವರು ಬಲವಾಗಿ ಸಿದ್ಧರಾಮಯ್ಯ ಆಗ್ರಹಿಸಿದರು.
ಜನರು ಕಾಯ್ದೆಯನ್ನು ವಿರೋಧಿಸಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರ ಜನರ ಭಾವನೆಗಳಿಗೆ ಗೌರವ ಕೊಡಬೇಕು. ತಮ್ಮ ಗುಪ್ತ ಕಾರ್ಯಸೂಚಿಯನ್ನು ಜಾರಿಗೆ ತರಲು, ಸಂಘ ಪರಿವಾರದವರನ್ನು ತಪ್ತಿಗೊಳಿಸುವ ಸಲುವಾಗಿ ಬಿಜೆಪಿ ಈ ಕಾಯ್ದೆ ಜಾರಿಗೊಳಿಸುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಕಾಯ್ದೆಗೆ ಅಂಗೀಕಾರ ದೊರೆತ ನಂತರರೂ ಗದ್ದಲ ಮುಂದುವರಿದ್ದರಿಂದ ಸಭಾಧ್ಯಕ್ಷರು ಕಲಾಪವನ್ನು ಅನಿದಿಷ್ಟಾವಧಿಗೆ ಮುಂದೂಡಿದರು.
ಸದನದ ಹೊರಗೆ ಮಾತನಾಡಿದ ಸಿದ್ದರಾಮಯ್ಯ, ಕಾಯ್ದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದರಲ್ಲದೆ, ಸರಕಾರ ಕಳುಹಿಸುವ ಕಾಯ್ದೆಗೆ ಸಹಿ ಹಾಕದಂತೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ತಿಳಿಸಿದರು.
ಎಲ್ಲರಿಗೂ ಹಾಲು ಕೊಡುವ ಗೋ ಮಾತೆಯ ರಕ್ಷಣೆಯಾಗಬೇಕಿದೆ. ಈ ಮೊದಲು ಜಾರಿಯಲ್ಲಿದ್ದ 1964ರ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಲ್ಲಿ ಒಂದು ಸಾವಿರ ರೂಪಾಯಿ ದಂಡ ಮತ್ತು ಆರು ತಿಂಗಳು ಶಿಕ್ಷೆಯಿತ್ತು. ಅದನ್ನು ಹೆಚ್ಚಿಸಿ 50 ಸಾವಿರ ರೂಪಾಯಿಗಳವರೆಗೆ ದಂಡ ಮತ್ತು 7 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ. ಸಕ್ಷಮ ಪ್ರಾಧಿಕಾರಿಯನ್ನಾಗಿ ತಹಸಿಲ್ದಾರ್‌ರನ್ನು ನಿಯೋಜಿಸಲಾಗಿದೆ. ತನಿಖೆ ಮತ್ತು ತಪಾಸಣೆಯ ಅಧಿಕಾರವನ್ನು ಪಿಎಸ್‌ಐಗೆ ನೀಡಲಾಗಿದೆ. ಉಪವಿಭಾಗಾಧಿಕಾರಿ, ಅನಂತರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿದೆ
-ಸಚಿವ ರೇವುನಾಯಕ ಬೆಳಮಗಿ
-ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ
-ಕಾಂಗ್ರೆಸ್‌ನ ರೋಷನ್‌ಬೇಗ್
-ಗಹ ಸಚಿವ ವಿ.ಎಸ್.ಆಚಾರ್ಯ
-ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್
ಜೆಡಿಎಸ್ ಸದಸ್ಯ ಬಂಡೇಪ್ಪ ಕಾಶೇಂಪುರ್