ವೇಶ್ಯಾವಾಟಿಕೆ: ಮೂವರು ಕಿರುತೆರೆ ನಟಿಯರು ಸೇರಿದಂತೆ ನಾಲ್ವರ ಬಂಧನ

ಬೆಂಗಳೂರು, ಜ.28: ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರು ಕಿರುತೆರೆ ನಟಿಯರು ಸೇರಿದಂತೆ ಒಟ್ಟು ನಾಲ್ವರನ್ನು ಸಿಸಿಬಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಸರೋಜಾ, ದೀಕ್ಷಿತಾ ಹಾಗೂ ಅನಿತಾ ಹಾಗೂ ಬಂಧಿತರಾದ ಕಿರುತೆರೆ ನಟಿಯರಾಗಿದ್ದು, ಸರೋಜಾರ ಪತಿ ಕೃಷ್ಣಮೂರ್ತಿಯವರನ್ನು ಬಂಧಿಸಲಾಗಿದೆ. ಇವರನ್ನು ಎಚ್‌ಎಸ್‌ಆರ್ ಲೇಔಟ್‌ನಿಂದ ಬಂಧಿಸಲಾಗಿದೆ. ಇವರು ಇಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ.

ಪ್ರೇರಣಾ, ಜೋಗುಳ, ಮನ್ವಂತರ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿರುವ ಸರೋಜಾ ಕಿರು ತೆರೆಯ ನಟಿಯರಿಗೆ ಸೀರಿಯಲ್‌ಗಳಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಂಬಿಸಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸರೋಜರ ಪತಿ ಕೃಷ್ಣಮೂರ್ತಿ ಕೂಡಾ ಸಹಕಾರ ನೀಡುತ್ತಿದ್ದರು ಎನ್ನಲಾಗಿದೆ.

ಸರೋಜಾ ಹಲವಾರು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಶನಿವಾರ ದಾಳಿ ನಡೆಸಿದಾಗ ದೀಕ್ಷಿತಾ ಹಾಗೂ ಅನಿತಾ ಸಿಕ್ಕಿ ಬಿದ್ದಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ದೀಕ್ಷಿತಾ ಹಾಗೂ ಅನಿತಾ ತಾವು ಸರೋಜಾರಿಗೆ ಫೋಟೊ ನೀಡಲು ಬಂದಿದ್ದೆವು. ವೇಶ್ಯಾವಾಟಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.